ಗೆಜ್ಜೆ ಕಳಚಿದ ಮಾರ್ಗೋಳಿ ಗೋವಿಂದ ಶೇರೆಗಾರ್

sheregar new
Published on

ಕುಂದಾಪುರ: ಐದು ದಶಕಗಳ ಕಾಲ ಬಡಗುತಿಟ್ಟು ಯಕ್ಷಗಾನದಲ್ಲಿ ಸ್ತ್ರೀಪಾತ್ರಧಾರಿಯಾಗಿ ಮೆರೆದಿದ್ದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಮಾರ್ಗೋಳಿ ಗೋವಿಂದ ಶೇರಿಗಾರ್ (96) ಭಾನುವಾರ ರಾತ್ರಿ ನಿಧನರಾದರು. ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ತಾಲೂಕಿನ ಬಸ್ರೂರು ಮಾರ್ಗೋಳಿಯಲ್ಲಿ 1926ರಲ್ಲಿ ಜನಿಸಿದ ಗೋವಿಂದ, ಮೂಡಲಕಟ್ಟೆಯಲ್ಲಿ ನಡೆದ ಮಂದಾರ್ತಿ ಮೇಳದ ಆಟ ನೋಡಿದ ನಂತರ 4ನೇ ತರಗತಿಗೆ ವಿದಾಯ ಹೇಳಿ ಮಂದಾರ್ತಿ ಮೇಳದಲ್ಲಿ ಕೋಡಂಗಿ ವೇಷದ ಮೂಲಕ ರಂಗಪ್ರವೇಶ ಮಾಡಿದ್ದರು. ಬಡಗು-ನಡುತಿಟ್ಟು ಕಂಡ ಪಾರಂಪರಿಕ ಶೈಲಿ ಅಗ್ರಮಾನ್ಯ ಸ್ತ್ರೀವೇಷಧಾರಿಗಳಲ್ಲಿ ಮಾರ್ಗೋಳಿ ಒಬ್ಬರಾಗಿ ಹೆಸರು ಪಡೆದಿದ್ದರು.

ವೀರಭದ್ರ ನಾಯಕರಿಂದ ನಾಟ್ಯ ಹಾಗೂ ರಂಗನಡೆ ಅಭ್ಯಾಸ ಮಾಡಿದ ಮಾರ್ಗೋಳಿ ಸೌಕೂರು ಮೇಳ ಸೇರಿದರು. ಬಡಗುತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿ ಕೊಕ್ಕರ್ಣೆ ನರಸಿಂಹ ಕಾಮತ್ ಒಡನಾಟದಲ್ಲಿ ಸಖಿ ಸ್ತ್ರೀವೇಷ ಸ್ಥಾನ ಪಡೆದಿದ್ದು ಯಕ್ಷ ಜೀವನದ ಹಾದಿಯಲ್ಲಿ ಒಂದು ಅತಿ ದೊಡ್ಡ ಮೈಲಿಗಲ್ಲು ಎಂದು ಮಾರ್ಗೋಳಿಯವರೇ ಹೇಳಿಕೊಳ್ಳುತ್ತಿದ್ದರು.

ಅಮೃತೇಶ್ವರಿ ಮೇಳದಲ್ಲಿ ಹಾರಾಡಿ ನಾರಾಯಣ ಗಾಣಿಗ ನಿರ್ದೇಶನದಲ್ಲಿ ಸಿಕ್ಕಿದ ಅವಕಾಶ ಸದುಪಯೋಗ ಪಡಿಸಿಕೊಂಡ ಮಾರ್ಗೋಳಿ, ಸ್ತ್ರೀವೇಷಧಾರಿಯಾಗಿ ಪರಿಪೂರ್ಣತೆಯತ್ತ ಹೆಜ್ಜೆ ಹಾಕಿದರು. ಮಂದಾರ್ತಿ, ಮಾರಣಕಟ್ಟೆ, ಅಮೃತೇಶ್ವರಿ ಮೇಳಗಳ ಜೋಡಾಟದಲ್ಲಿ ಮೀನಾಕ್ಷಿ ಪಾತ್ರದ ಮೂಲಕ ಪಂಥ ಗೆದ್ದ ಮಾರ್ಗೋಳಿ ತೆಂಕಿನ ಕೂಡ್ಲು ಮೇಳದ ಯಜಮಾನ ಏರಿಕಳ ಶ್ರೀನಿವಾಸರಾಯರ ಮನಸ್ಸು ಗೆದ್ದು, ಕೂಡ್ಲು ಮೇಳಕ್ಕೆ ಸೇರ್ಪಡೆ ಆದರು. ಎರಡು ವರ್ಷ ಮುಖ್ಯ ಸ್ತ್ರೀವೇಷಧಾರಿಯಾಗಿ ಮಾರಣಕಟ್ಟೆ ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದರು.

ಮಂದಾರ್ತಿ, ಮಾರಣಕಟ್ಟೆ, ಅಮೃತೇಶ್ವರಿ, ಸೌಕೂರು, ಇಡಗುಂಜಿ ಮೇಳಗಳಲ್ಲಿ ತಿರುಗಾಟ ಮಾಡಿದ್ದು, ಮಾರಣಕಟ್ಟೆ ಮೇಳವೊಂದರಲ್ಲೇ 26 ವರ್ಷ ತಿರುಗಾಟ ಮಾಡಿದ್ದರು. ಕಲಾವಿದರಾದ ಹಾರಾಡಿ ರಾಮ, ಹಾರಾಡಿ ಕುಷ್ಠ ಗಾಣಿಗ, ವೀರಭದ್ರ ನಾಯಕ, ಕೆರೆಮನೆ ಶಿವರಾಮ ಹೆಗ್ಡೆ, ಕೊಕ್ಕರ್ಣೆ ನರಸಿಂಹ ಕಾಮತ್, ಕೊಳ್ಕೆಬೈಲು ಶೀನ ನಾಯ್ಕ, ಹಾರಾಡಿ ನಾರಾಯಣ ಗಾಣಿಗ, ಉಪ್ಪೂರು ದ್ವಯರು ಹಾಗೂ ಮರವಂತೆ ದಾಸ ಭಾಗವತರ ಒಡನಾಡಿಯಾಗಿದ್ದರು.

ನಿವೃತ್ತಿ ನಂತರ ಸ್ವಗೃಹದಲ್ಲಿ 8 ವರ್ಷಗಳ ಕಾಲ ಹೆಣ್ಣು ಮಕ್ಕಳಿಗೆ ಯಕ್ಷಗಾನ ತರಬೇತಿ ಕೊಟ್ಟು ರಂಗ ಪ್ರವೇಶ ಮಾಡಿಸಿದ್ದರು. ಶಶಿಪ್ರಭೆ , ಮೀನಾಕ್ಷಿ, ಚಿತ್ರಾಂಗದೆ, ಪ್ರಭಾವತಿ, ಮೋಹಿನಿ, ದಮಯಂತಿ, ಸುಗರ್ಭೆ, ಸುಭದ್ರೆ, ಮದನಾಕ್ಷಿ, ತಾರಾವಳಿ, ಕೈಕೆ, ದೇವಿ ಮುಂತಾದ ಸ್ತ್ರೀ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು, ದೇವಿ, ಮೀನಾಕ್ಷಿ ಪಾತ್ರವು ಪ್ರಸಿದ್ಧಿ ತಂದು ಕೊಟ್ಟವು.

ಸ್ತ್ರೀ ಪಾತ್ರಗಳಿಗೆ ಸೀಮಿತವಾಗದೆ ಪುರುಷ ವೇಷಗಳಾದ ಅರ್ಜುನ, ಕೃಷ್ಣ, ರಾಮ, ಈಶ್ವರ, ಕಮಲಭೂಪ, ಹಂಸಧ್ವಜ ಪಾತ್ರ ಕೂಡ ಮಾರ್ಗೋಳಿಗೆ ಹೆಸರು ತಂದುಕೊಟ್ಟಿತ್ತು. ಮಾರ್ಗೋಳಿ ನಿಧನಕ್ಕೆ ಯಕ್ಷಾಭಿಮಾನಿಗಳು, ಉಡುಪಿಯ ಯಕ್ಷಗಾನ ಕಲಾರಂಗ ಕಂಬನಿ ಮಿಡಿದಿದೆ.

ಹೆಣ್ಣೆಂದು ಅಪಹರಿಸಲು ಬಂದಿದ್ದರು!

ಕೂಡ್ಲು ಮೇಳ ತಿರುಗಾಟದಲ್ಲಿ ಮಾರ್ಗೋಳಿ ಜನಪ್ರಿಯತೆ ಎಷ್ಟಿತ್ತು ಅಂದರೆ ಕುಂಬಳೆಯಲ್ಲಿ ಪಂಚವಟಿ ಪ್ರಸಂಗದ ಮಾಯಾ ಶೂರ್ಪನಖಿ ಪಾತ್ರದ ಅಭಿನಯಕ್ಕೆ ಮನಸೋತ ಕೆಲವರು ನಿಜವಾಗಿ ಹೆಣ್ಣು ಎಂದು ಭಾವಿಸಿ ಹೊತ್ತುಕೊಂಡು ಹೋಗಲು ಬಂದಿದ್ದರು. ಮೇಳದ ಯಜಮಾನ ಶ್ರೀನಿವಾಸ ರಾಯರು ಬಂದವರನ್ನು ಓಡಿಸಿದ್ದರು. ಈ ಪ್ರಸಂಗವನ್ನು ಗೋವಿಂದ ಶೇರೆಗಾರ್ ಸದಾ ನೆನಪಿಸಿಕೊಳ್ಳುತ್ತಿದ್ದರು. ಈ ಘಟನೆ ಬಳಿಕ ಅವರ ತೆಂಕು ಮೇಳ ತಿರುಗಾಟ ಕೊನೆಗೊಂಡಿತು. ಇವರಿಗೆ ನೂರಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. 1950ರಲ್ಲಿ ಮಾರಣಕಟ್ಟೆ ದೇವಳದ ವತಿಯಿಂದ ದೊರೆತ 20 ಗ್ರಾಂ ಚಿನ್ನದ ಸರ, ಕಾಸರಗೋಡು ಹಾಗೂ ಬೈಂದೂರಿನಲ್ಲಿ ಚಿನ್ನದ ಪದಕ, 2004ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಹಾಗೂ 2015ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅವರು ಭಾಜನರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net