

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿ ವೇಳೆ ಜಾತಿ, ಊರು, ಭಾಷೆ ಕೇಳಲಿಲ್ಲ. ಹಿಂದು ಎಂದು ಹೇಳಿದಾಗ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಾವು ನಮ್ಮ ಸಂಸ್ಕೃತಿ, ಧರ್ಮ ಇಟ್ಟುಕೊಂಡು ಮುನ್ನಡೆಯಬೇಕಿದೆ ಎಂದು ಅಯೋಧ್ಯೆ ಶ್ರೀರಾಮ ಮಂದಿರ ಖಜಾಂಚಿ, ಗೀತಾ ಪರಿವಾರದ ಸಂಸ್ಥಾಪಕ ಗೋವಿಂದದೇವ ಗಿರೀಜಿ ಮಹಾರಾಜ್ ಕರೆ ನೀಡಿದರು.
ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ಸಂತ ಮಹಾಪರಿಷತ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದುಗಳು ಹೃದಯದಿಂದ ಒಂದಾಗಬೇಕಿದೆ. ಭಾರತೀಯ ಸಂತ ಮಹಾಪರಿಷತ್ ಉದ್ದೇಶವೂ ಇದಾಗಿದೆ. ಒಂದಾಗದಿದ್ದರೆ ಭಯೋತ್ಪಾದಕರ ಶಕ್ತಿ ಹೆಚ್ಚಾಗುತ್ತದೆ ಎಂದರು.
ಬಟೆಂಗೆ ತೋ ಕಟೆಂಗೆ ಭಿನ್ನವಾದರೆ ನಾವು ತುಂಡು ತುಂಡಾಗುತ್ತೇವೆ ಎನ್ನುವುದು ಸಂತರಿಗೂ ಅನ್ವಯವಾಗುತ್ತದೆ. ಸಂತರ ಸಂಘಟನೆ ಸಲುವಾಗಿ ನನಗೆ ಬೇಕಾದ ಸೇವೆ ಮಾಡಲು ಕೊಡಿ, ನಾನು ಅದನ್ನು ಮಾಡಲು ಸಿದ್ಧನಿದ್ದೇನೆ. ಸಂತಸರು ಒಂದೇ ಕಡೆ ಸೇರಿದ್ದು ಅತೀವ ಸಂತಸ ತಂದಿದೆ ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಸಂತರನ್ನು ಒಂದೇ ಕಡೆ ಸೇರಿಸಿ ಸಮಾಜ ಜಾಗೃತಿ ಮಾಡುವ ಉದ್ದೇಶದಿಂದ ಆಯೋಜಿಸಿರುವ ಸಂತ ಪರಿಷತ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಸಂತರು ತೋರಿಸುವ ದಿಕ್ಕು ಸರಿಯಾಗಿರುತ್ತದೆ. ಇಡೀ ಸಮಾಜ ನಮ್ಮ ಕಡೆ ನೋಡುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಸಂಗಮ ಸಾಕ್ಷಿಯಾಗಿದೆ ಎಂದು ಹೇಳಿದರು.
ಉಗ್ರರಿಗೆ ಶಿಕ್ಷೆಯಾಗಲಿ: ನಮ್ಮ ಮಠದಲ್ಲಿ ನಮ್ಮ ಸಂಪ್ರದಾಯ ಇರಲಿ. ಆದರೆ, ನಾವು ಒಗ್ಗಟ್ಟಾಗಿ ಭಾರತದಲ್ಲಿರುವ ನಮ್ಮವರನ್ನು ಉಳಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಬಹಳ ಅನಾಹುತವಾಗುತ್ತದೆ. ಉಗ್ರರ ಅಟ್ಟಹಾಸಕ್ಕೆ ಖಂಡನೆ ಸಾಲದು, ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನಮ್ಮವರನ್ನು ಉಳಿಸಲು ಮುಂದಾಗಬೇಕು. ಉಗ್ರರಿಗೆ ಸರಿಯಾದ ಶಿಕ್ಷೆ ಕೊಟ್ಟರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹರಿಹರಪುರದ ಶ್ರೀಲಕ್ಷ್ಮೀ ನರಸಿಂಹ ಶಾರದಾ ಕ್ಷೇತ್ರದ ಶ್ರೀಶಂಕರಾಚಾರ್ಯರು ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ಕೈಲಾಸಾಶ್ರಮ ಮಹಾಸಂಸ್ಥಾನ ಜಯೇಂದ್ರ ಪುರಿ ಸ್ವಾಮೀಜಿ ಹಾಗೂ ಬೆಳಗಾವಿ, ಬೆಂಗಳೂರು, ಬಳ್ಳಾರಿ ಸೇರಿ 50 ಜನ ಎಲ್ಲ ಪರಂಪರೆ ಸ್ವಾಮೀಜಿ ಪಾಲ್ಗೊಂಡಿದ್ದರು.