

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಮುಂಬರುವ ವಿಧಾನಸಭಾ ಚುನಾವಣೆಗೆ ಶಾಸಕ ವಿ.ಮುನಿಯಪ್ಪ ವಯಸ್ಸಿನ ಲೆಕ್ಕಾಚಾರದಲ್ಲಿ ಶಸ್ತ್ರತ್ಯಾಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೈ ಪಾಳಯದಿಂದ ಚುನಾವಣಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಸ್ವತಃ ಶಾಸಕರೇ ಗೋವಿಂದ ಗೌಡರ ಸ್ಪರ್ಧೆಗೆ ಅಗತ್ಯ ಸಹಕಾರ, ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಮತ್ತೊಂದೆಡೆ ಈ ಭಾಗದಲ್ಲಿ ಕಾಂಗ್ರೆಸ್ ಗೆಲುವೇ ಪ್ರಮುಖ ಗುರಿ, ಇಲ್ಲಿ ಜನಸೇವಕನಾಗಿ ದುಡಿಯುವೆ, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂತಲೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮನವಿ ಮಾಡುವ ಮೂಲಕ ಸ್ಪರ್ಧೆಗೆ ಸಿದ್ಧ ಎಂಬುದನ್ನು ಸಾರಿದ್ದಾರೆ.
ರೇಷ್ಮೆಗೆ ಹೆಸರುವಾಸಿಯಾಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈ ಬಾರಿ ಪೈಪೋಟಿ ಹೆಚ್ಚಾಗಿದೆ. ಸ್ಪರ್ಧೆಯಿಂದ ವಿ.ಮುನಿಯಪ್ಪ ದೂರ ಉಳಿದರೆ, ಈಗಾಗಲೇ ಸಮಾಜ ಸೇವೆಯಲ್ಲಿ ತೊಡಗಿರುವ ರಾಜೀವ್‌ಗೌಡ, ಪುಟ್ಟು ಆಂಜಿನಪ್ಪ ಟಿಕೆಟ್‌ಗಾಗಿ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ. ಇದರ ನಡುವೆ ಶಾಸಕರ ಪುತ್ರ ಶಶಿಧರ್ ಹೆಸರು ಪ್ರಸ್ತಾಪವಾಗುತ್ತಿದೆ. ಹೀಗೆ ಆಕಾಂಕ್ಷಿಗಳ ಪ್ರತ್ಯೇಕ ಪೈಪೋಟಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಗೊಂದಲ ಉಂಟಾಗಿದ್ದು, ಇದೀಗ ಗೋವಿಂದಗೌಡರ ಪ್ರವೇಶದಿಂದಾಗಿ ಮತ್ತಷ್ಟು ಜಟಿಲವಾಗುವ ಅಥವಾ ನಿರಾಳವಾಗುವ ವಾತಾವರಣ ನಿರ್ಮಾಣವಾಗುತ್ತಿದೆ.
ಕೈ ಗೆಲುವೇ ಪ್ರಮುಖ ಗುರಿ
ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವೇ ಪ್ರಮುಖ ಗುರಿಯಾಗಿದೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ವಿ.ಮುನಿಯಪ್ಪ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸಲಹೆ ನೀಡಿದರು. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಪಕ್ಷ ಸಂಘಟಿಸಿ, ಅಧಿಕಾರಕ್ಕೆ ತರಲಾಗಿದೆ. ಹಾಗೆಯೇ ಮುಂಬರುವ ದಿನಗಳಲ್ಲೂ ಶಕ್ತಿ ತುಂಬುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾಗಿದೆ. ಇಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಸ್ಪರ್ಧಿಸಿದರೆ ಸಂಪೂರ್ಣ ಸಹಕಾರ ನೀಡಬೇಕಾಗಿದೆ ಎಂದರು. ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ವಿ.ಸುಬ್ರಮಣಿ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಡಿ.ವಿವೆಂಕಟೇಶ್, ಮೇಲೂರು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಮಂಜುನಾಥ್ ಮತ್ತಿತರರು ಇದ್ದರು.
ಜನ ಸೇವಕನಾಗಿ ಸೇವೆ ಸಲ್ಲಿಸಲು ಸಿದ್ಧ
ಶಾಸಕ ವಿ.ಮುನಿಯಪ್ಪ ತಂದೆ ಸಮಾನರು. ಅವರ ಮಾರ್ಗದರ್ಶನದಲ್ಲಿ ಅನೇಕ ನಾಯಕರು ಬೆಳೆದು ಬಂದಿದ್ದಾರೆ. ಇದರಲ್ಲಿ ನಾನೂ ಒಬ್ಬ. ಕ್ಷೇತ್ರದಲ್ಲಿ ಕಾಂಗ್ರೆಸ್ ಉಳಿಸಿಕೊಳ್ಳಬೇಕಾಗಿದೆ. ಇದಕ್ಕೆ ಶಾಸಕರ ನೇತೃತ್ವದಲ್ಲಿ ಎಲ್ಲರ ಸಹಕಾರದೊಂದಿಗೆ ಪಕ್ಷಕ್ಕಾಗಿ ದುಡಿಯಲಾಗುವುದು. ಜನಸೇವಕನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧವಿದ್ದೇನೆ. ತ್ವರಿತವಾಗಿ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದು ಪಕ್ಷದ ಹಿತ ಕಾಪಾಡಲು ಬದ್ಧ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ಅಭಿಮಾನಿಗಳಿಂದ ಹರ್ಷ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಗೋವಿಂದಗೌಡರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಗೋವಿಂದಗೌಡರು ತೀರ್ಮಾನಿಸಿದ್ದರು. ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುತ್ತಾರೆ ಎಂಬ ಕಾರಣದಿಂದ ಅವರು ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಶಾಸಶಾಸಕ ಮುನಿಯಪ್ಪ ತಂತ್ರಗಾರಿಕೆ
6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿ.ಮುನಿಯಪ್ಪ ಅಷ್ಟು ಸುಲಭವಾಗಿ ವಲಸಿಗ ನಾಯಕರಿಗೆ ಕ್ಷೇತ್ರದಲ್ಲಿ ಪಟ್ಟ ಕಟ್ಟಲು ಬಯಸುತ್ತಿಲ್ಲ. ಈಗಲೂ ಸ್ವಹಿಡಿತದ ತುಡಿತ ಹೊಂದಿದ್ದಾರೆ. ಕರೊನಾ ಬಳಿಕ ಸುಸ್ತಾಗಿ, ಚುನಾವಣಾ ಕಣದಿಂದ ದೂರ ಉಳಿಯಲು, ವಾರುಸುದಾರ ಶಶಿಧರ್ ಅವರನ್ನು ಗೆಲ್ಲಿಸಿಕೊಂಡು ಅಧಿಪತ್ಯ ಉಳಿಸಿಕೊಳ್ಳಲು ಬಯಸಿದ್ದರು. ಆದರೆ, ಪುತ್ರ ಮಾತ್ರ ಪೂರ್ಣ ಪ್ರಮಾಣದಲ್ಲಿ ಮನಸ್ಸು ತೋರಲಿಲ್ಲ. ಅವರವರ ಬಲವಂತಕ್ಕೆ ಕೆಲಕಾಲ ಉತ್ಸಾಹ ವ್ಯಕ್ತಪಡಿಸಿ, ಮತ್ತೆ ನಿರಾಸೆಯ ವರ್ತನೆಯನ್ನು ತೋರಿ ಬೇಸರ ಮೂಡಿಸುವ ಮೂಲಕ ಅನ್ಯ ನಾಯಕರಿಗೆ ಮಣೆ ಹಾಕುವುದೇ ಒಳಿತು ಎಂಬ ಸಂದೇಶವನ್ನು ಪರೋಕ್ಷವಾಗಿ ಸಾರಿದ್ದರು. ಇದು ಪುಟ್ಟು ಆಂಜಿನಪ್ಪ ಮತ್ತು ರಾಜೀವ್ ಗೌಡ ಖುಷಿಗೆ ಕಾರಣವಾಗಿತ್ತು. ಇದರ ನಡುವೆ ಎಲ್ಲಿಂದಲೋ ಈಗ ಬಂದವರಿಗೆ ಕ್ಷೇತ್ರವನ್ನು ಒಪ್ಪಿಸುವುದು ಬೇಡ ಎಂಬ ತಂತ್ರಗಾರಿಕೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸುವ ಯೋಜನೆಯನ್ನು ಶಾಸಕರು ಅನಿವಾರ್ಯವಾಗಿ ರೂಪಿಸಿದ್ದಾರೆ ಎನ್ನಲಾಗಿದೆ.