ಗೋವಿಂದಪ್ಪನದು ಲಾಕಪ್ ಡೆತ್?

Govindappa Pujar death
Published on

ಹಾವೇರಿ: ಗುತ್ತಲ ಪೊಲೀಸ್ ಠಾಣೆಯಲ್ಲಿ ಸೆ. 7ರಂದು ದಾಖಲಾಗಿರುವ ಗೋವಿಂದಪ್ಪ ಪೂಜಾರ ಸಾವು ಅಸಹಜವೋ ಅಥವಾ ಲಾಕಪ್ ಡೆತ್ತೋ ಎನ್ನುವ ಅನುಮಾನ ಶುರುವಾಗಿದೆ. ಅಸಹಜ ಸಾವು ಪ್ರಕರಣ (ಯುಡಿಆರ್) ದಾಖಲಾಗಿದೆ. ಗೋವಿಂದಪ್ಪ ಪೂಜಾರ ಸಾವಿನ ಬಗ್ಗೆ ಪೊಲೀಸರ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ.

ಗದಗ ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದ ಗೋವಿಂದಪ್ಪ ಪೂಜಾರ (35) ಸಾವು ವಿವಿಧ ರೀತಿಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ವಾಂತಿ ಮಾಡಿಕೊಂಡು ಗೋವಿಂದಪ್ಪ ಮೃತಪಟ್ಟಿದ್ದಾರೆ. ಆತನನ್ನು ನಾವು ಬಂಧಿಸಿರಲಿಲ್ಲ. ವಿಚಾರಣೆಯನ್ನೂ ಮಾಡಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಿ, ಥಳಿಸಿದ ಪರಿಣಾಮ ಪೊಲೀಸರ ವಶದಲ್ಲಿದ್ದಾಗಲೇ ಗೋವಿಂದಪ್ಪ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಗಂಭೀರ ಆರೋಪ ಮಾಡುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಫ್​ಐಆರ್​ನಲ್ಲಿ ಏನಿದೆ?

ಗೋವಿಂದಪ್ಪನಿಗೆ ಫಿಟ್ಸ್ (ಮೂರ್ಛೆರೋಗ) ಇದ್ದು, ಸೆ. 6ರಂದು ರಾತ್ರಿ 1.15ರ ಸುಮಾರಿಗೆ ವಾಂತಿ ಮಾಡಿಕೊಂಡಿದ್ದರು. ಹೊಸರಿತ್ತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಉಪಚಾರ ಮಾಡಿ, ಹೆಚ್ಚಿನ ಚಿಕಿತ್ಸೆಗೆ ಗುತ್ತಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ನಸುಕಿನ 4.15ಕ್ಕೆ ಗೋವಿಂದಪ್ಪ ಮೃತಪಟ್ಟಿದ್ದಾರೆ ಎಂದು ಗುತ್ತಲಾಸ್ಪತ್ರೆ ವೈದ್ಯರು ತಿಳಿಸಿದರು. ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಆತನ ಸಹೋದರಿ ಗೀತಾ ಪಾಟೀಲ ತಿಳಿಸಿದ್ದಾರೆ ಎಂದು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆದರೆ, ಸಹೋದರಿ ಗೀತಾ ಪಾಟೀಲ, ‘ನನ್ನ ಅಣ್ಣ ಗೋವಿಂದಪ್ಪನನ್ನು ಸೆ. 6ರಂದು ಗುತ್ತಲ ಪೊಲೀಸ್ ಠಾಣೆಯ ಸಿಬ್ಬಂದಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಇಚ್ಚಂಗಿಯಲ್ಲಿ ವಶಕ್ಕೆ ಪಡೆದಿದ್ದರು. ನಂತರ ಹೊಸರಿತ್ತಿ ಪೊಲೀಸ್ ಹೊರ ಠಾಣೆಗೆ ಕರೆತಂದು, ಕಳ್ಳತನದ ಬಗ್ಗೆ ಬಾಯಿ ಬಿಡಿಸಲು ಮನಸೋ ಇಚ್ಛೆ ಥಳಿಸಿದ್ದರು. ಇದರಿಂದ ಗೋವಿಂದಪ್ಪ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥನಾಗಿ ಉಸಿರು ಚೆಲ್ಲಿದ್ದಾನೆ’ ಎಂದು ಆರೋಪಿಸಿದ್ದಾರೆ.

ಗೋವಿಂದಪ್ಪ ಅಸ್ವಸ್ಥನಾಗಿದ್ದಾನೆ ಎಂದು ಬಾಲೆಹೊಸೂರು ಮನೆಯಿಂದ ಸೆ. 7ರಂದು ರಾತ್ರಿ ನನ್ನನ್ನು ಪೊಲೀಸರು ಠಾಣೆಗೆ ಕರೆಸಿಕೊಂಡರು. ಆಗ ನನ್ನ ಅಣ್ಣ ವಾಂತಿ ಮಾಡಿಕೊಂಡು ನಿತ್ರಾಣನಾಗಿದ್ದ. ಹೊಸರಿತ್ತಿ ಆಸ್ಪತ್ರೆಯಲ್ಲಿ ವೈದ್ಯರಿಂದ ಚಿಕಿತ್ಸೆ ಕೊಡಿಸಲು ಪೊಲೀಸರು ಯತ್ನಿಸಿದರು. ಅಲ್ಲಿನ ವೈದ್ಯರು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು. ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ನನ್ನ ಅಣ್ಣ ನನ್ನ ಮಡಿಲಿನಲ್ಲೇ ಉಸಿರು ಚೆಲ್ಲಿದ ಎಂದು ಸಹೋದರಿ ಗೀತಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗೋವಿಂದಪ್ಪನ ಜತೆ ವಶಕ್ಕೆ ಪಡೆಯಲಾಗಿದ್ದ ಗಂಗಪ್ಪ ಎಂಬಾತ ಘಟನೆಯ ಬಗ್ಗೆ ಮಾತನಾಡಿ, ಸೆ. 6ರಂದು ಗೋವಿಂದಪ್ಪನ ಜತೆ ನನ್ನನ್ನು ಪೊಲೀಸರು ಬಂಧಿಸಿದ್ದರು. ಮಧ್ಯರಾತ್ರಿ 2 ಗಂಟೆಗೆ ಪೊಲೀಸರು ತರಿಸಿಕೊಟ್ಟ ಊಟವನ್ನು ಮಾಡಿದೆವು. ಗೋವಿಂದಪ್ಪನ ಜತೆ ಹುಬ್ಬಳ್ಳಿ ಮೂಲದ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ಪೊಲೀಸರು ಕರೆತಂದಿದ್ದರು. ಪೊಲೀಸರು ವಿಚಾರಣೆ ವೇಳೆ ಥಳಿಸಿದ ಪರಿಣಾಮ, ಗೋವಿಂದಪ್ಪ ಮತ್ತು ಹುಬ್ಬಳ್ಳಿ ಮೂಲದ ಆರೋಪಿ ಇಬ್ಬರೂ ವಾಂತಿ ಮಾಡಿಕೊಂಡು ನಿತ್ರಾಣಗೊಂಡಿದ್ದರು. ವಿಚಾರಣೆ ನಡೆಸಿದ ಬಳಿಕ ಪೊಲೀಸರು ನನ್ನನ್ನು ಮನೆಗೆ ಬಿಟ್ಟು ಕಳುಹಿಸಿದರು ಎಂದು ತಿಳಿಸಿದ್ದಾರೆ.

ಆದ್ದರಿಂದ ಈ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮೇಲಧಿಕಾರಿಗಳು ಸೂಕ್ತ ತನಿಖೆ ನಡೆಸಿದರೆ ಸತ್ಯ ಬಯಲಿಗೆ ಬರಲಿದೆ.

ಪ್ರಕರಣ ಮುಚ್ಚಿ ಹಾಕಲು ಯತ್ನ...?

ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಸಹೋದರಿ ಗೀತಾಗೆ ಹಣದ ಆಮಿಷ ಒಡ್ಡಿ, ತಮ್ಮನಿಗೆ ಮೂರ್ಛೆ ರೋಗವಿತ್ತು ಎಂದು ಬಲವಂತದ ಹೇಳಿಕೆ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಮೂರ್ಛೆ ರೋಗದಿಂದ ಸತ್ತಿದ್ದಾನೆ ಎಂದು ಹೇಳಲು ಪೊಲೀಸರು ಒತ್ತಡ ಹಾಕಿದರು. ನನ್ನ ಅಣ್ಣನಿಗೆ ಮೂರ್ಛೆ ರೋಗವಿರಲಿಲ್ಲ. ಸೆ. 6ರಂದು ನನ್ನನ್ನು ಠಾಣೆಗೆ ಕರೆಸಿಕೊಂಡಾಗ ನನ್ನ ಸಹೋದರ ಗೋವಿಂದಪ್ಪ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥನಾಗಿದ್ದ ಎಂದು ಸಹೋದರಿ ಗೀತಾ ವಿಡೀಯೊದಲ್ಲಿ ಮಾತನಾಡಿದ್ದಾರೆ.

ಗೋವಿಂದಪ್ಪನ ಸಾವಿನ ಕುರಿತು ಅವರ ಕುಟುಂಬದವರೇ ದೂರು ನೀಡಿದ್ದಾರೆ. ಆದರೂ ಬೇರೆ ಬೇರೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡಲು ಹಾವೇರಿ ಡಿವೈಎಸ್ಪಿಗೆ ಸೂಚಿಸಿದ್ದೇನೆ. ಮೃತರ ಕುಟುಂಬಸ್ಥರು ಮತ್ತೆ ದೂರು ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. | ಶಿವಕುಮಾರ ಗುಣಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net