

ಮೈಸೂರು: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ), ಮಹಾತ್ಮಾಗಾಂಧಿ ಮೆಮೊರಿಯಲ್ ಕಾಲೇಜಿನಿಂದ ನೀಡಲಾಗುವ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಯನ್ನು ಪುರಾತತ್ವ ಶಾಸ್ತ್ರಜ್ಞ ಪ್ರೊ.ಎ.ವಿ.ನರಸಿಂಹಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಘಟಕ, ಕನ್ನಡ ಸಾಹಿತ್ಯ ಕಲಾ ಕೂಟದಿಂದ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಂದು ಲಕ್ಷ ರೂ. ನಗದು ಒಳಗೊಂಡಿರುವ ಪ್ರಶಸ್ತಿಯನ್ನು ಟಿ.ವಿಮಲಾ ವಿ.ಪೈ ಪ್ರಾಯೋಜಕತ್ವ ವಹಿಸಿದ್ದಾರೆ.
ವಿಮರ್ಶಕರಾದ ಬೆಳಗೋಡು ರಮೇಶ್ ಭಟ್ ಅಭಿನಂದನಾ ಭಾಷಣ ಮಾಡಿ, ಪ್ರೊ.ಎ.ವಿ.ನರಸಿಂಹಮೂರ್ತಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಣ್ಯ, ಲಿಪಿ ಶಾಸ್ತ್ರಜ್ಞರೆಂದೇ ಹೆಸರಾಗಿದ್ದಾರೆ. ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಮೀಮಾಂಸೆ ಬೋಧಿಸುವ ಮೂಲಕ ಮಹಾರಾಜರಿಂದಲೂ ಗೌರವಿಸಲ್ಪಟ್ಟಿದ್ದಾರೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರಿಗೆ ಪ್ರಶಸ್ತಿ ಪ್ರದಾನ ಮಾಡುವುದು ಪುರಸ್ಕಾರಕ್ಕೇ ಪುರಸ್ಕಾರ ಸಂದಂತಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಪ್ರೊ.ಎ.ವಿ.ನರಸಿಂಹಮೂರ್ತಿ ಮಾತನಾಡಿ, ರಾಷ್ಟ್ರಕವಿ ಗೋವಿಂದ ಪೈ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿರುವುದು ನನ್ನ ಭಾಗ್ಯ. ಪೈಗಳು ಭಾಷಾ ಪಂಡಿತರು. ಕನ್ನಡ, ತುಳು, ಮರಾಠಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲದೇ, ಚೀನಾ, ಟಿಬೆಟ್‌ಗಳನ್ನು ಒಳಗೊಂಡಂತೆ ಹಲವು ವಿದೇಶಿ ಭಾಷೆಗಳಲ್ಲೂ ಪಾಂಡಿತ್ಯ ಹೊಂದಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪಾದೇಕಲ್ಲು ವಿಷ್ಣು ಭಟ್ಟ ಮಾತನಾಡಿ, ಪ್ರೊಎವಿನ್ ಅವರು ಡಿವಿಜಿ ಅವರ ‘ಜ್ಞಾಪಕ ಚಿತ್ರಶಾಲೆ’ಯಂತೆ, ತಮ್ಮ ಸಹೋದ್ಯೋಗಿಗಳ ಹಾಗೂ ತಾವು ನೋಡಿದರ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಪುಸ್ತಕಗಳನ್ನು ಬರೆದಿದ್ದಾರೆ. ಇದರಿಂದ ಹಿರಿಯ ತಲೆಮಾರಿನ ವಿದ್ವತ್ ಪರಿಚಯವನ್ನು ತಿಳಿಯಬಹುದಾಗಿದೆ ಎಂದರು.
ಗೋವಿಂದ ಪೈ ಅವರು ಯಾವುದಾದರೂ ವಿಷಯವನ್ನು ಬರೆಯಲು ಶುರು ಮಾಡಿದರೆ, ಆ ವಿಚಾರವಾಗಿ ವಿಮರ್ಶೆ ನಡೆಸಿ, ಸಂಶೋಧನೆ ಮಾಡುತ್ತಿದ್ದರು. ಆದ್ದರಿಂದ ಅವರ ಅಧ್ಯಯನ ವ್ಯಾಪ್ತಿ ವಿಸ್ತಾರವಾಗಿತ್ತು. ಅವರು ಯಾವುದೇ ಪ್ರಶಸ್ತಿ, ಪ್ರಚಾರದ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಕೆಲಸ ಮಾಡುತ್ತಿದ್ದರು. ಹಾಗಾಗಿ ಅವರ ವಿಚಾರಗಳನ್ನು ಕಿರಿಯರಿಗೆ ತಿಳಿಸುವಂತಹ ಕೆಲಸವನ್ನು ನಾವು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕೂಟ ಅಧ್ಯಕ್ಷ ಎಂ.ಚಂದ್ರಶೇಖರ್, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ಇದ್ದರು.