ರಾಜ್ಯಪಾಲರ ಸ್ಪಂದನೆ ಸ್ವಾಗತಾರ್ಹ: ಎಂ.ರವಿಕುಮಾರ್

Published on

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಸಲ್ಲಿಸಿದ ಮನವಿಗೆ ರಾಜ್ಯಪಾಲರು ತಕ್ಷಣ ಸ್ಪಂದಿಸಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ರವಿಕುಮಾರ್ ಹೇಳಿದ್ದಾರೆ.
ಮಾಹಿತಿ ನೀಡುವಂತೆ ಮುಖ್ಯಮಂತ್ರಿಗೆ ನೋಟಿಸ್ ನೀಡಿರುವ ರಾಜ್ಯಪಾಲರು, ಸಂವಿಧಾನ ಎತ್ತಿ ಹಿಡಿದು ಪ್ರಜಾಸತ್ತಾತ್ಮಕ, ಪಕ್ಷಾತೀತವಾಗಿ ಕೆಲಸ ಮಾಡಿದ್ದಾರೆ. ವಿಧಾನಸೌಧದ ಒಳಗೆ ದುರ್ಬಲ ಪ್ರತಿಪಕ್ಷದ ಮೇಲೆ ಸಿದ್ದರಾಮಯ್ಯ ಮತ್ತು ಅವರ ತಂಡ ಮುಗಿಬಿದ್ದಿತ್ತು. ಬಹುಕೋಟಿ ಮುಡಾ ಹಗರಣವನ್ನು ಮುಚ್ಚಿ ಹಾಕುವ ಎಲ್ಲ ಯತ್ನ ಮಾಡಲಾಗಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪ್ರತಿಭಟಿಸುವವರ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಧ್ವನಿ ಎತ್ತುವವರ ಧ್ವನಿ ದಮನ ಮಾಡುವ ಹಾಗೂ ನಿಜವಾದ ಸಂವಿಧಾನ ವಿರೋಧಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಡಾ ಹಗರಣದ ತನಿಖೆಗೆ ಸಹಕರಿಸಬೇಕೆಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಆನಂದ್, ರವಿ, ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net