ರಾಜ್ಯಪಾಲರದ್ದು ವಿವೇಚನಾ ರಹಿತ ವರ್ತನೆ; ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಕಿಡಿ

mysore
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮವಹಿಸಲು ರಾಜ್ಯಪಾಲರು ನೀಡಿರುವ ಅನುಮತಿಯು ಅಧಿಕಾರದ ದುರ್ಬಳಕೆ ಮಾತ್ರವಲ್ಲ, ವಿವೇಚನಾ ರಹಿತ ವರ್ತನೆಗೊಂದು ಉತ್ತಮ ಉದಾಹರಣೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಕಿಡಿಕಾರಿದರು.


ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಎಲ್ಲಿಯೂ ಭಾಗಿಯಾಗಿಲ್ಲ. ನಿವೇಶನಕ್ಕಾಗಿ ಯಾರಿಗೂ ಪತ್ರ ಬರೆದಿಲ್ಲ, ಒತ್ತಡ ತಂದಿಲ್ಲ. ಆದಾಗ್ಯೂ, ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಪೂರ್ವಾಗ್ರಹದಿಂದ ಕೂಡಿದೆ ಎಂದು ಪ್ರಕಟಣೆಯಲ್ಲಿ ಹರಿಹಾಯ್ದರು


ಗಣಿ ಹಗರಣದಲ್ಲಿ ಒಂದು ಕಂಪನಿಗೆ ಅನುಕೂಲ ಮಾಡಿಕೊಡುವಂತೆ ಕಡತದಲ್ಲಿ ನೇರವಾಗಿ ಉಲ್ಲೇಖಿಸಿ ಸಹಿ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಲ್ಲಿಕೆಯಾಗಿರುವ ಪ್ರಾಸಿಕ್ಯೂಷನ್ ಅನುಮತಿ ಕಡತವನ್ನು ಇದೇ ರಾಜ್ಯಪಾಲರು, ಕಳೆದ 10 ತಿಂಗಳಿನಿಂದಲೂ ಅದುಮಿಟ್ಟುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಎಚ್‌ಡಿಕೆ ಮಾತ್ರವಲ್ಲ. ಬಿಜೆಪಿ ನಾಯಕರಾಗಿರುವ ನಿರಾಣಿ, ಶಶಿಕಲಾ ಜೊಲ್ಲೆ ಇನ್ನಿತರರು ಭಾಗಿಯಾಗಿರುವ ಅಕ್ರಮಗಳ ತನಿಖೆಗೂ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಆದರೆ, ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಮಿಂಚಿನ ವೇಗದಲ್ಲಿ ಸುಳ್ಳುದೂರಿಗೆ ಸ್ಪಂದಿಸಿದ್ದಾರೆ. ಇದು ರಾಜಭವನವು ಸ್ವಹಿತಾಸಕ್ತಿಯ ರಾಜಕಾರಣಕ್ಕೆ ದುರ್ಬಳಕೆಯಾಗಿದೆ ಎನ್ನುವುದನ್ನು ಸಾಬೀತು ಮಾಡಿದೆ ಎಂದರು.


ಇಷ್ಟಕ್ಕೂ ರಾಜ್ಯಪಾಲರು ಹಗರಣದಲ್ಲೂ ಭಾಗಿಯಾಗದ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡಿದ್ದಾರೆ. ರಾಜ್ಯಪಾಲರು ಅಶುದ್ಧ ರಾಜಕೀಯಕ್ಕಿಳಿದಿದ್ದಾರೆನ್ನುವುದು ಇದರಿಂದ ಸ್ಪಷ್ಟ ಎಂದರು.


ಬಿಜೆಪಿ-ಜೆಡಿಎಸ್ ನಾಯಕರ ವಿಕೃತ ರಾಜಕೀಯ ಆಲೋಚನೆಗಳ ಜಾರಿಗೆ ರಾಜ್ಯಪಾಲರು ಸೇತುವೆಯಾಗಿರುವುದು ಸಜ್ಜನ ರಾಜಕಾರಣಕ್ಕೆ ಮಾಡಿದ ಅವಮಾನ. ಕಾನೂನು ಅರಿಯದ ವ್ಯಕ್ತಿ ರಾಜ್ಯಪಾಲರ ಸ್ಥಾನದಲ್ಲಿ ಮುಂದುವರಿದರೆ ಇದು ರಾಜ್ಯಕ್ಕೆ ಮಾಡುವ ಅವಮಾನ. ಹೀಗಾಗಿ ರಾಜ್ಯಪಾಲರು ರಾಜಭವನ ತೊರೆಯಬೇಕು ಎಂದು ಆಗ್ರಹಿಸಿದರು.


ತನ್ನ ರಾಜಕೀಯ ಹಿತಾಸಕ್ತಿಗನುಗುಣವಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ನರೇಂದ್ರಮೋದಿ ಮತ್ತು ಅಮಿತ್ ಷಾ ಕಾಲಕಾಲಕ್ಕೆ ಜೈಲಿಗಟ್ಟುತ್ತಿದ್ದಾರೆ. ಇಂತಹ ನೀಚ ರಾಜಕೀಯಕ್ಕೆ ರಾಜ್ಯಪಾಲರೇ ದಾಳ. ಜಾರ್ಖಂಡ್‌ನ ಸೋರೇನ್ ಜೈಲಿನಿಂದ ಹೊರಬಂದರೆ, ಕೇಜ್ರಿವಾಲ್ ಇನ್ನೂ ಈ ಅಸಹ್ಯ ಕೂಪದಲ್ಲಿ ಸಿಲುಕಿಕೊಂಡಿದ್ದಾರೆ. ಸಂವಿಧಾನ ರಕ್ಷಿಸಬೇಕಾದ ಮೋದಿ, ಷಾ ಮಾದರಿಯ ವ್ಯಕ್ತಿಗಳು ತಮ್ಮ ಸ್ವಾರ್ಥಸಾಧನೆಗೆ ಪ್ರಜಾತಾಂತ್ರಿಕ ಮೌಲ್ಯ ಗಾಳಿಗೆ ತೂರುತ್ತಿರುವುದು ಖಂಡನೀಯ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net