

ಶ್ರೀರಂಗಪಟ್ಟಣ: ರಾಜ್ಯಪಾಲ ಥಾವರ್ ಚಂದ್ ಗೆಹಲ್ಲೋತ್ ಅವರು ಏಕಪಕ್ಷೀಯ ನಡೆಗಳಿಂದ ತೆಗೆದುಕೊಳ್ಳುತ್ತಿರುವ ಆತುರದ ನಿರ್ಣಯಗಳು ಅವರ ಸ್ಥಾನದ ಮಹತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಮಾಜಿ ಸಭಾಪತಿ ಹಾಗೂ ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಆರ್.ಸುದರ್ಶನ್ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿಗೆ ಭಾನುವಾರ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಪಟ್ಟಣದ ಖಾಸಗಿ ಹೊಟೇಲ್ ಬಳಿ ಕ್ಷೇತ್ರದ ಕಾಂಗ್ರೆಸ್ ಕಾಯಕರ್ತರು ಬರಮಾಡಿಕೊಂಡು ಸ್ವಾಗತಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಪಡದ ವಿಚಾರಕ್ಕೆ ಹಗರಣದ ಪಟ್ಟ ಕಟ್ಟಿ ಹೇಗಾದರೂ ಸರಿ ರಾಜ್ಯದ ಜನರು ನೀಡಿರುವ ಜನಪರ ಸರ್ಕಾರವನ್ನು ಕೆಡವಲು ಷಡ್ಯಂತ್ರ ರೂಪಿಸುತ್ತಿರುವ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳ ಕುತಂತ್ರಕ್ಕೆ ರಾಜ್ಯಪಾಲರು ಸಹ ಏಕಪಕ್ಷೀಯ ನಿರ್ಣಯ ಕೈಗೊಂಡ ನೀತಿ ಸರಿಯಲ್ಲ. ಇದು ರಾಜ್ಯದಲ್ಲಿ ಸಂವಿಧಾನ ಉಳಿಸಬೇಕಾದ ಮುಖ್ಯಸ್ಥರೇ ಉಲ್ಲಂಸುವ ನೀತಿಯಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಎಲ್ಲ ಸಚಿವರು, ಶಾಸಕರ ನೇತೃತ್ವದ ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ ಪರವಿದ್ದು, ಹೈಕಮಾಂಡ್ ಸಹ ಅವರಿಗೆ ಬೆಂಬಲ ಸೂಚಿಸಿದೆ. ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿದ್ದು, ಆ.29ರ ಕಡೆಗೆ ನಮ್ಮೆಲ್ಲರ ನೀರಿಕ್ಷೆ ಇದೆ. ಜತೆಗೆ ಡಿಸೆಂಬರ್ ವೇಳೆ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿ ಸಭೆಯಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಚರ್ಚಿಸಿದ್ದು, ಅಭಿವೃದ್ಧಿಗಾಗಿ ಆಡಳಿತ ವಿಸ್ತರಣೆ ನಡೆಯಲಿದೆ ಎಂದರು.
ಇನ್ನು ಕಳೆದ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಮೈಸೂರು-ಕೊಡಗು ಕ್ಷೇತ್ರದ ವಾಸ್ತವ ಪರಿಸ್ಥಿತಿ ಹಾಗೂ ಜನರ ಮನಸ್ಥಿತಿ ಅಭಿಪ್ರಾಯಗಳ ಅವಲೋಕಿಸಿ ನಮ್ಮಲ್ಲಿ ಕೈಗೊಳ್ಳಬೇಕಿರುವ ಕೆಲವು ಬದಲಾವಣೆ ಹಾಗೂ ಅಭಿವೃದ್ಧಿಯತ್ತ ಗಮನ ಹರಿಸಬೇಕಾದ ಕುರಿತು ಪಕ್ಷ ಸತ್ಯಶೋಧನಾ ಸಮಿತಿ ರಚಿಸಿದ್ದು ನಮ್ಮ ತಂಡ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ನಿರ್ದೇಶಕರಾದ ದೊಡ್ಡಬಳ್ಳಾಪುರದ ಮಾಜಿ ಶಾಸಕ ವೆಂಕಟರಮಣಯ್ಯ, ಸದಸ್ಯ ಸೂರಜ್ ಹೆಗ್ಗಡೆ, ಶ್ರೀರಂಗಪಟ್ಟಣ ನಗರ ಕಾಂಗ್ರೆಸ್ ಕಾರ್ಯಾಧ್ಯಕ್ಷ ಲೋಕೇಶ್, ಪೆಟ್ರೋಲ್ ಬಂಕ್ ಪ್ರಸನ್ನ, ಮುದ್ದೇಗೌಡ, ನಾಗೇಂದ್ರ ಇತರರು ಇದ್ದರು.