ಕೇಂದ್ರ ತನಿಖಾ ಸಂಸ್ಥೆಗಳ ಬಳಿಕ ರಾಜ್ಯಪಾಲರ ದುರ್ಬಳಕೆ

21CBP1b
Published on

ಚಿಕ್ಕಬಳ್ಳಾಪುರ: ಕೇಂದ್ರ ತನಿಖಾ ಸಂಸ್ಥೆಗಳ ಮಾದರಿಯಲ್ಲಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲವರಾಯಸ್ವಾಮಿ ಆರೋಪಿಸಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ವಿಪಕ್ಷಗಳನ್ನು ಮಣಿಸಲು ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳಲಾಯಿತು. ಈಗ ಇದರ ಸಾಲಿಗೆ ಕರ್ನಾಟಕ ರಾಜ್ಯಪಾಲರು ಸೇರಿದ್ದಾರೆ. ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಆಡಳಿತ ವ್ಯವಸ್ಥೆಯನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿದ್ದಾರೆ ಎಂದರು.

ರಾಜ್ಯಪಾಲರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಅನುಮತಿ ನೀಡಿದ್ದಾರೆ. ಆದರೆ, ಕೇಂದ್ರ ಸಚಿವ ಎಚ್?.ಡಿ.ಕುಮಾರಸ್ವಾಮಿ ವಿರುದ್ಧ ಗಣಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರೇ ತನಿಖೆಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಇದರಲ್ಲಿ ತಾರತಮ್ಯವೆಸಗಿರುವುದು ಗೊತ್ತಾಗುತ್ತದೆ ಎಂದರು.

*ಕರ್ನಾಟಕದ ಬಗ್ಗೆ ಉದಾಸೀನ

ಬರಗಾಲದಲ್ಲಿಯೇ ರಾಜ್ಯಕ್ಕೆ ಕೇಂದ್ರ ಸರ್ಕಾರವು ಸೂಕ್ತ ಪರಿಹಾರ ನೀಡಿಲ್ಲ. ಕರ್ನಾಟಕವನ್ನು ಮೊದಲಿನಿಂದಲೂ ಉದಾಸೀನವಾಗಿ ಕಾಣುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಕೃಷಿ ಸಚಿವರು ಆರೋಪಿಸಿದರು.

ಕಳೆದ ಸಾಲಿನ ಬರಗಾಲದಲ್ಲಿ ರಾಜ್ಯವು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾದರೂ ಕೇಂದ್ರ ಸರ್ಕಾರವು ಸ್ಪಂದಿಸಲಿಲ್ಲ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಯೋಜನೆಯ ಮೂಲಕವಾದರೂ ಸಮಸ್ಯೆಗಳ ಪರಿಹಾರದ ಕಡೆಗೆ ಗಮನಹರಿಸಲಿಲ್ಲ. ಇದರಿಂದ ರಾಜ್ಯವೇ ಹೊಣೆಯನ್ನು ಹೊರಬೇಕಾಯಿತು. ಇದರ ನಡುವೆ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಪಕ್ಷಕ್ಕೆ ಅನುಕೂಲವಾದರೆ ಸಾಕು, ರೈತರಿಗೆ ನಷ್ಟವಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ನೀತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net