

ಬೆಂಗಳೂರು: ಚುನಾವಣೆಗಳಲ್ಲಿ ಮತದಾನ ಗಣರಾಜ್ಯಕ್ಕೆ ಯಜ್ಷವಿದ್ದಂತೆ.ಒಂದು ಮತದಿಂದ ಏನು ಆಗುವುದಿಲ್ಲ ಎಂದು ಕೆಲವರು ಮತದಾನದಿಂದ ದೂರ ಉಳಿಯುತ್ತಾರೆ.ಆದರೆ, ಹಲವು ಬಾರಿ ಸೋಲು, ಗೆಲುವು ಒಂದು ಮತದಿಂದ ನಿರ್ಧಾರವಾಗಲಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಕರ್ನಾಟಕ ಶಾಖೆ ವತಿಯಿಂದ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ "ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರ ಆಶಯ ಮತ್ತು ಆಶೋತ್ತರಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ. ಮತದಾನ ನಮ್ಮ ಹಕ್ಕು ಮಾತ್ರವಲ್ಲ ನಮ್ಮ ಕರ್ತವ್ಯವೂ ಆಗಿದೆ. ಆದರೆ, ದೇಶದಲ್ಲಿ 18ರಿಂದ 24 ವರ್ಷದೊಳಗಿನ ಹೆಚ್ಚಿನ ಯುವಕರು ಮತದಾನ ಮಾಡಲು ಆಸಕ್ತಿ ವಹಿಸುತ್ತಿಲ್ಲ ಎಂಬುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ದೇಶದ ನಾಯಕತ್ವದಲ್ಲಿ ಯುವಕರು ತಮ್ಮ ಪಾತ್ರ ನಿರ್ವಹಿಸುವಂತಾಗಬೇಕು.ದೇಶದ ಹಿತ,ಅಭಿವೃದ್ಧಿಗಾಗಿ ಮತ ಚಲಾಯಿಸಬೇಕು. ಮತ ಚಲಾಯಿಸಲು ಇತರರನ್ನು ಪ್ರೇರೇಪಿಸಬೇಕೆಂದು ತಿಳಿಸಿದರು.
ಹೊಸ ಮತದಾರರಿಗೆ ರಾಜ್ಯಪಾಲರು ಗುರುತಿನ ಚೀಟಿ ವಿತರಿಸಿದರು. ವಿದ್ಯಾರ್ಥಿಗಳು,ಅಧಿಕಾರಿಗಳು ಸೇರಿ 1,500ಕ್ಕೂ ಅಧಿಕ ಮಂದಿ ಮತದಾನದ ಪ್ರತಿಜ್ಞೆ ವಿಧಿ ಸ್ವೀಕರಿಸಿದರು.ಮತದಾರರ ಪಟ್ಟಿ ಪರಿಷ್ಕರಣೆ ಸೇರಿ ಇತರೆ ವಿಷಯಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳಿಗೆ ಪ್ರಶಸ್ತಿ, ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕುರುಮರಾವ್,ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್ ಗಿರಿನಾಥ್ ಸೇರಿ ಮತ್ತಿತರರಿದ್ದರು.
ಮಾದರಿ ಆಡಳಿತ ವ್ಯವಸ್ಥೆ
ಜಗತ್ತಿನಲ್ಲಿ ಹಲವು ರೀತಿಯ ಆಡಳಿತ ವ್ಯವಸ್ಥೆಗಳಿವೆ. ಇವುಗಳಲ್ಲಿ ಪ್ರಜಾಪ್ರಭುತ್ವವು ಅತ್ಯಂತ ಮಾದರಿ ಆಡಳಿತ ವ್ಯವಸ್ಥೆಯಾಗಿದೆ. ಸಂಪೂರ್ಣ ಆಡಳಿತದ ಅಧಿಕಾರ ಜನರ ಮೇಲೆ ಅವಲಂಬಿತವಾಗಿದೆ. ಪ್ರಪಂಚದ ವಿವಿಧ ದೇಶಗಳಲ್ಲಿ ವಿವಿಧ ರೀತಿಯ ಮತದಾನ ವ್ಯವಸ್ಥೆಗಳಿವೆ. ಭಾರತ ನೇರ ಚುನಾವಣಾ ಮತದಾನ ಪದ್ಧತಿ ಅಳವಡಿಸಿಕೊಂಡಿದೆ ಎಂದು ಥಾವರ್ಚಂದ್ ಗೆಹಲೋತ್ ಹೇಳಿದರು. ಹಲವು ದೇಶಗಳಲ್ಲಿ ಮತದಾನ ಕಡ್ಡಾಯವಾಗಿದ್ದು, ಮತ ಚಲಾಯಿಸದವರಿಗೆ ದಂಡ ಹಾಕಲು ಮತ್ತು ಜೈಲು ಶಿಕ್ಷೆಗೂ ಅವಕಾಶವಿದೆ. ಪ್ರಜಾಪ್ರಭುತ್ವದ ಸಂಕೇತವಾದ ಭಾರತೀಯ ಸಂವಿಧಾನದಲ್ಲಿ ಸ್ವತಂತ್ರ ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಯ ಪರಿಕಲ್ಪನೆಯು ಸಮಾನತೆ ಮತ್ತು ಸ್ವಾತ್ರಂತ್ಯ ಹಕ್ಕಿನೊಂದಿಗೆ ಪ್ರತಿಯೊಬ್ಬ ವ್ಯಕ್ತಿಯ ಮತವನ್ನು ಪ್ರಮುಖವಾಗಿಸಿದೆ ಎಂದರು.