ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಯುವಜನರು ಶ್ರಮಿಸಿ : ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ

ksou
Published on

ಮೈಸೂರು: ಹೋರಾಟಗಳು ಮತ್ತು ವೈಫಲ್ಯಗಳಿಂದ ನಾವು ಕಲಿಯಬೇಕು. ವಿದ್ಯಾರ್ಥಿಗಳೇ, ನಿಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡಬೇಡಿ, ತೊಂದರೆಗಳಿಗೆ ಹೆದರಬೇಡಿ ಮತ್ತು ಯಾವಾಗಲೂ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಮುಂದುವರಿಯಿರಿ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ ನೀಡಿದರು.

ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 20ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಹೇಳಿದಂತೆ ಸೋಲು ಯಶಸ್ಸಿನ ಮೆಟ್ಟಿಲು. ನಮ್ಮ ಜೀವನದಲ್ಲಿ ಸೋಲು-ಗೆಲವು ನಿಶ್ಚಿತ. ಸೋತರೆ ಕುಗ್ಗಬಾರದು. ಅದನ್ನೇ, ಗೆಲುವಿನ ಮೆಟ್ಟಿಲು ಎಂದುಕೊಂಡು ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.

ವಿದ್ಯಾವಂತ ಯುವಕರು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಬಲ್ಲರು. ಯುವಜನತೆ ಯಾವುದೇ ಕ್ಷೇತ್ರವನ್ನು ಅನುಸರಿಸುತ್ತಿರಲಿ - ಅದು ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ, ಕಲೆ ಅಥವಾ ಸಮಾಜ ಸೇವೆಯಾಗಿರಲಿ, ಅವರ ಪ್ರಯತ್ನಗಳಿಂದ ದೇಶವು ಪ್ರಗತಿ ಸಾಧಿಸುತ್ತದೆ. ಇಂದಿನ ಯುಗವು ನಾವೀನ್ಯತೆ ಮತ್ತು ಸ್ಪರ್ಧೆಯ ಯುಗವಾಗಿದೆ. ಪ್ರಸ್ತುತ ಡಿಜಿಟಲ್ ಯುಗವಾಗಿದ್ದು, ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ ಮತ್ತು ಸುಧಾರಿತ ತಂತ್ರಜ್ಞಾನಗಳು ಜಗತ್ತಿಗೆ ಹೊಸ ಆಯಾಮಗಳನ್ನು ನೀಡುತ್ತಿವೆ. ಕಲಿಕೆಯ ಜತೆಗೆ ನಾವೀನ್ಯತೆ ಮತ್ತು ಸೃಜನಶೀಲತೆಯೊಂದಿಗೆ ನಾವು ಮುಂದುವರಿಯಬೇಕು. ಒಬ್ಬ ಯಶಸ್ವಿ ವ್ಯಕ್ತಿ ಎಂದರೆ ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುವ, ಹೊಸ ವಿಷಯಗಳನ್ನು ಕಲಿಯುವ ಮತ್ತು ನಾಯಕತ್ವದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಲಕ್ಷಾಂತರ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ವ್ಯವಸ್ಥೆಯ ಮೂಲಕ ಕಲಿಕೆಯ ಅವಕಾಶಗಳನ್ನು ಒದಗಿಸಿದೆ. ಅವರ ವೈಯಕ್ತಿಕ ಮತ್ತು ವೃತ್ತಿಪರ ಆಕಾಂಕ್ಷೆಗಳನ್ನು ಪೂರೈಸಲು ಅನುವು ಮಾಡಿಕೊಡುತ್ತಿದೆ ಎಂದು ಶ್ಲಾಘಿಸಿದರು.

ವಿದ್ಯಾರ್ಥಿಗಳು ನಿಮ್ಮ ಶಿಕ್ಷಕರು ಮತ್ತು ಪಾಲಕರನ್ನು ಗೌರವಿಸಬೇಕು. ಇಂದು ನಿಮ್ಮ ಯಶಸ್ಸಿನಲ್ಲಿ ನಿಮ್ಮ ಶಿಕ್ಷಕರು ಮತ್ತು ಪಾಲಕರ ಪ್ರಮುಖ ಕೊಡುಗೆಯನ್ನು ಹೊಂದಿದ್ದಾರೆ. ಶಿಕ್ಷಕರು ನಿಮಗೆ ಜ್ಞಾನವನ್ನು ನೀಡಿ, ಸರಿಯಾದ ದಿಕ್ಕನ್ನು ತೋರಿಸಿ, ಸ್ಫೂರ್ತಿ ನೀಡಿದರು. ಪಾಲಕರು ಮತ್ತು ಕುಟುಂಬವು ನಿಮ್ಮನ್ನು ಬೆಂಬಲಿಸಿ, ಹೋರಾಟದಲ್ಲಿ ನಿಮ್ಮ ಬೆಂಬಲಕ್ಕೆ ನಿಂತ್ತಿದ್ದಾರೆ ಎಂದರು.

ಸ್ವಾತಂತ್ರ್ಯದ ನಂತರ ದೇಶವು ಎಲ್ಲ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಮತ್ತು ದೇಶದ ಆರ್ಥಿಕತೆಯು ಪ್ರಬಲ ವಾಗಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇಂದು ಜಗತ್ತಿನಲ್ಲಿ ಪರಿಸರ ಅಸಮತೋಲನವು ಗಂಭೀರ ಸಮಸ್ಯೆಯಾಗಿದೆ. ಪರಿಸರದ ರಕ್ಷಣೆ ಮತ್ತು ಪ್ರಚಾರ ನಮಗೆಲ್ಲರಿಗೂ ಮುಖ್ಯವಾಗಿದೆ. ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಗೆ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಹೇಳುತ್ತಿದ್ದರು - ಏಳಿ ಎದ್ದೇಳಿ, ಎಚ್ಚರಗೊಳ್ಳಿರಿ ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ ಎಂದು. ಒಂದು ಸಮಯದಲ್ಲಿ ಒಂದು ಕೆಲಸವನ್ನು ಮಾತ್ರ ಮಾಡಿ ಮತ್ತು ಅದನ್ನು ಪರಿಪೂರ್ಣವಾಗಿ ಮಾಡಿ ಮುಗಿಸಿ. ಸ್ವಾಮಿ ವಿವೇಕಾನಂದರು ರಾಷ್ಟ್ರದ ಅಭಿವೃದ್ಧಿಗೆ ಯುವ ಶಕ್ತಿಯೇ ಆಧಾರ ಎಂದು ನಂಬಿದ್ದರು. ಅವರು ಯುವಜನರನ್ನು ಸ್ವಾವಲಂಬಿ, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪ್ರೇರೇಪಿಸಿದರು. ಅವರ ತೋರಿದ ಮಾರ್ಗದಲ್ಲಿ ನಡೆಯಬೇಕು. ಶಿಕ್ಷಣವು ಜೀವನದ ಬಹುದೊಡ್ಡ ಕೊಡುಗೆಯಾಗಿದೆ, ಶಿಕ್ಷಣವು ಉದ್ಯೋಗದ ಜತೆಗೆ ನಮಗೆ ನೈತಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಸಹ ನೀಡುತ್ತದೆ. ಶಿಕ್ಷಣವು ವ್ಯಕ್ತಿಯ ಜೀವನದಲ್ಲಿ ಹೊಸ ಆಲೋಚನೆಗಳು, ಜ್ಞಾನ ಮತ್ತು ಸಾಧ್ಯತೆಗಳನ್ನು ತುಂಬುವ ನಿರಂತರ ಪ್ರಯಾಣವಾಗಿದೆ ಎಂದು ಹೇಳಿದರು.

ಈ ವಿಶ್ವವಿದ್ಯಾಲಯದಿಂದ ಪಡೆದ ಜ್ಞಾನದಿಂದ ಮುಂಬರುವ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿರಿ ಮತ್ತು ಏಕ್ ಭಾರತ್-ಶ್ರೇಷ್ಠ ಭಾರತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಭಾಗವಹಿಸಿ. ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರವನ್ನು ವಹಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿ ಎಂದು ಕರೆ ನೀಡಿದರು.

ಘಟಿಕೋತ್ಸವದಲ್ಲಿ ಚಿತ್ರದುರ್ಗದ ಐಡಿಯಲ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಎಂ. ಇರ್ಫಾನುಲ್ಲಾ ಷರೀಫ್ ಮತ್ತು ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಅವರ ಅತ್ಯುತ್ತಮ ಸಾಧನೆಗಳಿಗಾಗಿ ಅಭಿನಂದಿಸುತ್ತೇನೆ ಮತ್ತು ಸಮಾಜ ಮತ್ತು ದೇಶದ ಪ್ರಗತಿಯಲ್ಲಿ ಅವರ ಪ್ರಮುಖ ಕೊಡುಗೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಕೌಶಲ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಘಟಿಕೋತ್ಸವ ಭಾಷಣ ಮಾಡಿದರು. ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಪರೀಕ್ಷಾಂಗ ಕುಸಲಚಿವ ಡಾ.ಎಚ್. ವಿಶ್ವನಾಥ್, ಅಕಾಡೆಮಿಕ್ ಡೀನ್ ಡಾ.ಎನ್. ಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net