ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿಯಾಗಲಿ

Untitled design (16)
Published on

ಗಂಗಾವತಿ: ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಭಾನುವಾರ ಭೇಟಿ ನೀಡಿ ದರುಶನ ಪಡೆದುಕೊಂಡರು.

ವಿವಿಧ ಕಾರ್ಯಕ್ರಮಗಳ ನಿಮಿತ್ತ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಮತ್ತು ಪತ್ನಿ ಎಸ್.ಶಕುಂತಲಾ ಅವರು ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದು, ದೇವಾಲಯದ ಆಡಳಿತ ಮಂಡಳಿ ಪೂರ್ಣಕುಂಭದೊಂದಿಗೆ ಸ್ವಾಗತಿಸಿಕೊಂಡಿತ್ತು. ಪಾದಗಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಮಾಜಿ ಶಾಸಕ ಪರಣ್ಣಮುನವಳ್ಳಿ ನೇತೃತ್ವದ ಬಿಜೆಪಿ ಮುಖಂಡರು ದಂಪತಿಯನ್ನು ಸನ್ಮಾನಿಸಿ, ಆಂಜನೇಯ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಿದರು. ಬೆಟ್ಟಕ್ಕೆ ಆಗಮಿಸಿದ್ದ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯಲಿವಾಳದ ಕಿತ್ತೂರು ರಾಣಿ ಚನ್ನಮ್ಮ ಸ್ವಯಂ ಸೇವಾ ಸಂಸ್ಥೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಲ್ಲ ಕಂಬ ಪ್ರದರ್ಶನ ವೀಕ್ಷಿಸಿ, ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ನಿ ಎಸ್.ಶಕುಂತಲಾರೊಂದಿಗೆ ಬೆಟ್ಟ ಹತ್ತಿದ ರಾಜ್ಯಪಾಲ ಸಿ.ಎಚ್.ವಿಜಯಶಂಕರ, ಬೆಟ್ಟದ ಮೇಲಿನ ಪರಿಸರ ಸೊಬಗನ್ನು ನೋಡಿ ಸಂತಸಪಟ್ಟರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದಂಪತಿ, ದೇವಾಲಯ ಆಡಳಿತ ಮಂಡಳಿ ಸಿಇಒ ಪ್ರಕಾಶರಾವ್‌ರಿಂದ ಮಾಹಿತಿ ಪಡೆದುಕೊಂಡರು.

ತಿರುಪತಿ ಮಾದರಿಯಲ್ಲಿ ಮೆಟ್ಟಿಲು ಅಭಿವೃದ್ಧಿಪಡಿಸಬೇಕಿದ್ದು, ಮಾಜಿ ಸಿಎಂಗಳಾದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೀಡಿರುವ ವಿಶೇಷ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ನೆರವು ಕೊಡಿಸುವಲ್ಲಿ ಮಧ್ಯವಸ್ಥಿಕೆವಹಿಸಲು ಸಿದ್ಧ ಎಂದು ರಾಜ್ಯಪಾಲ ಸಿ.ಎಚ್.ವಿಜಯಶಂಕರ ಹೇಳಿದರು. ಬೆಟ್ಟದಲ್ಲಿ ಕೈಗೊಳ್ಳಬೇಕಿರುವ ಪ್ರದಕ್ಷಿಣೆ ಪಥ, ರೋಪವೇ, ಶಾಪಿಂಗ್ ಕಾಂಪ್ಲೆಕ್ಸ್ ಸೇರಿ ಇತರೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕ ಗಾಲಿ ಜನಾರ್ದನರೆಡ್ಡಿ ಮಾಹಿತಿ ನೀಡಿದರು.

ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ತಿಪ್ಪೇರುದ್ರಸ್ವಾಮಿ, ನಗರಸಭೆ ಉಪಾಧ್ಯಕ್ಷೆ ಪಾರ್ವತಿ ದುರುಗೇಶ ದೊಡ್ಮನಿ, ಸದಸ್ಯರಾದ ಪರಶುರಾಂ ಮಡ್ಡೇರ್, ಮುಖಂಡರಾದ ಕಾಶಿನಾಥ್ ಚಿತ್ರಗಾರ, ಮನೋಹರ ಗೌಡ ಹೇರೂರು, ವೀರೇಶ ಬಲಕುಂದಿ, ಪಂಪಣ್ಣ ನಾಯಕ, ಯಮನೂರ್ ಚೌಡ್ಕಿ, ರಾಜೇಶ್ವರಿ ಸುರೇಶ,ಅರಿಕೇರಿ ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net