ಗಳಿಕೆಯ ಪಾಲು ಸಮಾಜಕ್ಕೂ ವಿನಿಯೋಗಿಸಿ

udp-1-mutt 1
Published on

ಉಡುಪಿ: ಪ್ರತಿಯೊಬ್ಬ ವ್ಯಕ್ತಿಯ ಉನ್ನತಿಯಲ್ಲಿ ಅನೇಕ ಮಂದಿಯ ಸಹಕಾರವೂ ಇರುತ್ತದೆ. ಹೀಗಾಗಿ ಶ್ರೀಕೃಷ್ಣ ಗೀತೆಯಲ್ಲಿ ತಿಳಿಸಿದಂತೆ ಗಳಿಕೆಯ ಪಾಲನ್ನು ಸಮಾಜಕ್ಕೂ ವಿನಿಯೋಗಿಸಬೇಕು. ಒಬ್ಬರೇ ಅನುಭವಿಸಿದರೆ ಕಳ್ಳತನಕ್ಕೆ ಸಮ ಎಂದು ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್​ ಖಾನ್​ ಹೇಳಿದರು.

ಭಾನುವಾರ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ಶ್ರೀಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವೇದ ಮತ್ತು ಉಪನಿಷತ್ಗಳ ಸಾರವನ್ನು 700 ಶ್ಲೋಕಗಳ ಗೀತೆಯಲ್ಲಿ ಹಿಡಿದಿಡಲಾಗಿದೆ. ಆದ್ದರಿಂದ ಗೀತೆಯನ್ನು ಅಭ್ಯಾಸ ಮಾಡಿದರೆ ವೇದ&ಶಾಸ್ತ್ರಗಳನ್ನು ಓದಿದಂತಾಗುತ್ತದೆ. ಸರ್ವ ದೇವ ನಮಸ್ಕಾರ@ ಕೇಶವಂ ಪ್ರತಿಗಚ್ಛತಿ ಎಂಬಂತೆ ನಾನಾ ಹೆಸರಿನಿಂದ ಪೂಜೆ ಸಲ್ಲಿಸಿದರೂ ಕೊನೆಗೆ ಭಗವಂತನಿಗೆ ಸಲ್ಲುತ್ತದೆ. ಹೀಗಾಗಿ ನಾವು ಹೇಗೆ ಭಕ್ತಿ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು.

ಮಾನವೀಯ ಮೌಲ್ಯ ಪ್ರತಿಪಾದಿಸಿದ ದೇಶ ಭಾರತ
ವಿಶ್ವ ಸಂಸ್ಥೆಯಲ್ಲಿ 1948 ಮಾನವ ಹಕ್ಕುಗಳ ಠರಾವು ಮಂಡಿಸಲಾಯಿತು. ಆದರೆ ಭಾರತದಲ್ಲಿ ಸಾವಿರ ವರ್ಷಗಳಿಂದ ಪ್ರತಿ ಯೊಬ್ಬ ಮನುಷ್ಯನಲ್ಲಿ ದೇವರನ್ನು ಕಾಣುವ ಮಾನವ ದಿವ್ಯತೆಯನ್ನು ಪ್ರತಿಪಾದಿಸಲಾಗಿದೆ. ನಮ್ಮ ಪೂರ್ವಜರ ಬಗ್ಗೆ ನಾವು ಹೆಮ್ಮೆಪಡಬೇಕು. ನಮ್ಮ ಭವ್ಯ ಪರಂಪರೆಯ ಬಗ್ಗೆ ವಿಶ್ವಕ್ಕೆ ಮನದಟ್ಟು ಮಾಡಲು ಸಾಧ್ಯವಾಗದೇ ಇರುವುದು ದುರದೃಷ್ಟಕರ ಸಂಗತಿ ಎಂದರು.

ಇಂಡೋನೇಷ್ಯಾ ಕಥೆ
ಇಂಡೋನೇಷ್ಯಾ ಇಸ್ಲಾಮಿಕ್​ ದೇಶವಾಗಿದ್ದರೂ ಅಲ್ಲಿನ ಅಧ್ಯಕ್ಷರ ಅರಮನೆ ಮುಂಭಾಗ ಕೃಷ್ಣಾರ್ಜುನ ಸಂವಾದ ಬೃಹತ್​ ಪುತ್ಥಳಿಗಳಿವೆ. ನಾಗರಿಕರು ಇಸ್ಲಾಂ ನಮ್ಮ ಧರ್ಮ. ಇದು ನಮ್ಮ ಸಂಸತಿ ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದರು.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಅಶೀರ್ವಚನ ನೀಡಿ, ಖಾನ್​ ಅವರು ಅಭಿನವ ಅಬ್ದುಲ್​ ಕಲಾಂ ಆಗಿದ್ದಾರೆ. ಅವರಿಗೆ ರಾಷ್ಟ್ರ ಕಾರ್ಯ ಮಾಡುವ ಅವಕಾಶ ಸಿಕ್ಕಿದಂತೆ ಇವರಿಗೂ ಉನ್ನತ ಸ್ಥಾನಮಾನ ಪ್ರಾಪ್ತಿಯಾಗಲಿ ಎಂದು ಹಾರೈಸಿದರು.

ಕಿರಿಯ ಶ್ರೀ ಸುಶ್ರೀಂದ್ರತಿರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶಾಸಕ ಯಶ್​ ಪಾಲ್​ ಸುವರ್ಣ, ಗುರ್ಮೆ ಸುರೇಶ್​ ಶೆಟ್ಟಿ, ವಿಧಾನ ಪರಿಷತ್​ ಸದಸ್ಯ ಪ್ರತಾಪಸಿಂಹ ನಾಯಕ್​, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ , ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್​.ಎಸ್​. ಬಲ್ಲಾಳ್​, ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿಯ ಹರೀಶ್​ ಭಟ್​ ಮತ್ತು ವಿದ್ವಾನ್​ ಪ್ರಭಾಕರ ಅಡಿಗ ಮಂಗಳೂರು ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೂತ್ತಮ ಆಚಾರ್ಯ ಸ್ವಾಗತಿಸಿ, ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net