

ಶಿವಮೊಗ್ಗ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸಂವಿಧಾನಕ್ಕೆ ಬದ್ಧರಾಗದೇ ಬಿಜೆಪಿಯವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲ ರಾಜ್ಯ ಸತ್ಯಶೋಧನಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಯಾರೋ ಹೇಳಿದ ತಕ್ಷಣ ರಾಜೀನಾಮೆ ಕೊಡಲಾಗುವುದಿಲ್ಲ. ಪ್ರತಿಪಕ್ಷ ನಾಯಕರು ಸಿಎಂ ರಾಜೀನಾಮೆ ನೀಡುತ್ತಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನರಿ ತೋಳದ ಕಥೆಯಂತೆ ಬಿಜೆಪಿ ಜೆಡಿಎಸ್ ನಾಯಕರ ಪಾಡಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಪಕ್ಷ ಗಂಗಾ ನದಿ ಇದ್ದಂತೆ. ಇಲ್ಲಿಗೆ ಬಂದ ಮೇಲೆ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರಬೇಕು. ಇಲ್ಲಿ ಮೂಲ ಕಾಂಗ್ರೆಸ್, ವಲಸೆ ಕಾಂಗ್ರೆಸ್ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜ್ಯಪಾಲರು ಕೇಂದ್ರ ಮತ್ತು ರಾಜ್ಯದ ನಡುವೆ ಸೇತುವೆಯಾಗಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ರಾಜ್ಯಪಾಲರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.