

ಹೊನ್ನಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ನ್ಯಾಮತಿ- ಹೊನ್ನಾಳಿ ತಾಲೂಕುಗಳ ಕಾಂಗ್ರೆಸ್ ಪಕ್ಷ, ಅಹಿಂದ ಒಕ್ಕೂಟ, ಸಿದ್ದರಾಮಯ್ಯ ಅಭಿಮಾನಿ ಬಳಗ, ರೈತ ಸಂಘ ಹಾಗೂ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಆ. 23ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಅಂದು ಬೆಳಗ್ಗೆ ಪಟ್ಟಣದ ಕನಕದಾಸ ವೃತ್ತದಲ್ಲಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಳಿಕ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತರಳಿ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಿಜೆಪಿ- ಜೆಡಿಎಸ್ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿದ್ದು, ಸರ್ಕಾರ ಪತನ ಮಾಡುವ ಸಂಚು ಹೂಡಿರುವ ವಿಷಯವನ್ನು ರಾಜ್ಯದ ಜನರಿಗೆ ತಿಳಿಸಬೇಕಾಗಿದೆ ಎಂದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಎಳ್ಳಷ್ಟು ಇಲ್ಲದಿದ್ದರೂ ಅನಗತ್ಯವಾಗಿ ಪ್ರತಿಪಕ್ಷದವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದು, ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದರೆ, ನಮಗೆ ರಾಜಕೀಯ ಅಧಿಕಾರ ಸಿಗುವುದಿಲ್ಲ ಎನ್ನುವ ಭಯದಿಂದ ಈ ಕುತಂತ್ರ ನಡೆಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಸಣ್ಣಕ್ಕಿ ಬಸವನಗೌಡ, ಆರ್.ನಾಗಪ್ಪ, ಎಚ್.ಎ.ಉಮಾಪತಿ, ರುದ್ರೇಶ್ ಕೊಡತಾಳ್, ಕುಂಬಳೂರು ವಾಗೀಶ್ ಇತರರಿದ್ದರು.