ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ; ಕಾಂಗ್ರೆಸ್​​ನಲ್ಲಿ ಹೆಚ್ಚಾಯ್ತು ತಳಮಳ

siddaramaiah
Published on

ಬೆಂಗಳೂರು:  ರಾಜ್ಯಪಾಲರು ಮೂಡಾ ಅಕ್ರಮ  ಪ್ರಕರಣದಲ್ಲಿ ಮಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ತಳಮಳ ಸೃಷ್ಟಿಯಾಗಿದೆ. ರಾಜ್ಯಪಾಲರ ಅನುಮತಿ ಕೊಟ್ಟ ನಂತರ ಮುಖ್ಯಮಂತ್ರಿಗಳು ತುರ್ತಾಗಿ ಕಾನೂನು ಸಲಹೆ ಪೊನ್ನಣ್ಣ ಹಾಗೂ ಇತರ ಹಿರಿಯ ಸಹೋದ್ಯೋಗಿಗಳ ಜತೆ ಮುಂದಿನ ನಡೆ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಅದಾಗಲೇ ಪಕ್ಷದ ಹೈಕಮಾಂಡ್​ಗೆ ಪ್ರಾಸಿಕ್ಯೂಷನ್​ ಕುರಿತ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.

ಹೈಕಮಾಂಡ್​ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದೆ. ಈ ನಡುವೆ ತುರ್ತು ಸಚಿವೆ ಸಂಪುಟ ಸಭೆ ಕರೆದಿರುವ ಸಿದ್ದರಾಮಯ್ಯ ಎಲ್ಲಾ ಮಂತ್ರಿಗಳಿಗೂ ಎಲ್ಲೇ ಇದ್ದರೂ ರಾಜಧಾನಿ ಬೆಂಗಳೂರಿಗೆ ಬರುವಂತೆ ಮಾಹಿತಿ ರವಾನಿಸಿದ್ದಾರೆ.

ಮಂತ್ರಿ ಪರಿಷತ್ತಿನ ನಿರ್ಣಯ ಹಾಗೂ ಸಲಹೆ ನಂತರ ರಾಜ್ಯಪಾಲರ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವುದಿಲ್ಲ. ಎಲ್ಲಾ ಮುಗಿಯಿತು ಎನ್ನುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್​​ಗೆ ರಾಜ್ಯಪಾಲರ ಅನುಮತಿ ದೊಡ್ಡ ಶಾಕ್​ ನೀಡಿದೆ. ಹೀಗಾಗಿ ಮಂತ್ರಿಗಳಲ್ಲಿ ಕಾಂಗ್ರೆಸ್​​ ಶಾಸಕರಲ್ಲಿ ಮುಂದೇನು ಎನ್ನುವ ಚೆರ್ಚೆ ಆರಂಭವಾಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕಾಗುತ್ತಾ? ಇಲ್ಲವೇ ಕಾನೂನು ಹೋರಾಟ ನಡೆಸುತ್ತಾರಾ? ಹೈಕಮಾಂಡ್​ ಮನಸ್ಸಲ್ಲಿ ಏನಿದೆ? ಎಂಬೆಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಏನೇ ಆದರೂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲ ಬೇಕು ಎಂದು ಕಾಂಗ್ರೆಸ್​ನ ಒಂದು ಬಣ ನಿರ್ಣಯಿಸಿದೆ. ಸಿದ್ದರಾಮಯ್ಯ ವಿರೋಧಿ ಬಣ ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ.

ಒಟ್ಟಾರೆ ರಾಜ್ಯಪಾಲರ ಮುಖ್ಯಮಂತ್ರಿಗಳ ವಿರುದ್ದ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿರುವುದರಿಂದ ಕಾಂಗ್ರೆಸ್​​ನಲ್ಲಿ ಒಂದು ರೀತಿಯ ಆತಂಕ, ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಕಾನೂನು ಹೋರಾಟದ ಹಾದಿ ತುಳಿಯಲು ಮುಖ್ಯಂಮತ್ರಿಗಳು ಹಾಗೂ ಹೈಕಮಾಂಡ್​​ ನಿರ್ಧಾರಿಸಿದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net