

ಚಿಕ್ಕಬಳ್ಳಾಪುರ: ನಿರಂತರ ಹೋರಾಟದ ಒತ್ತಡದ ಹಿನ್ನೆಲೆಯಲ್ಲಿ ಅಂತು ಇಂತೂ ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವು ಲೋಕಾರ್ಪಣೆಗೊಂಡಿತು.
ವಿದ್ಯಾರ್ಥಿಗಳ ನಿರಂತರ ಅಳಲು, ಹೋರಾಟಗಾರ ಧ್ವನಿ, ನ್ಯಾಯಾಧೀಶರ ಖಡಕ್ ಎಚ್ಚರಿಕೆ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ 8 ವರ್ಷಗಳ ಬಳಿಕ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ತರಗತಿಗಳ ಕಾರ್ಯಾರಂಭÀಕ್ಕೆ ಚಾಲನೆ ನೀಡಿದರು. ಈಗಲಾದರೂ ಸೇವೆಗೆ ಲಭ್ಯವಾಗುತ್ತಿರುವಿಕೆಯು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.
ಕಳೆದ 2015 ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ಮೇಲ್ಸುತುವೆ ಸಮೀಪದ 2 ಎಕರೆ ಜಾಗದಲ್ಲಿ 10 ಕೋಟಿ ರೂ ವೆಚ್ಚದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 2017 ರೊಳಗೆ ಕಾಮಗಾರಿ ಮುಗಿದು, ಉದ್ಘಾಟನೆಯಾಗಬೇಕಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳು, ಸ್ಥಳೀಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಅಸಡ್ಡೆ ಭಾವನೆ, ಅನುದಾನದ ಕೊರತೆ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಕೆಲಸವು ಕುಂಟುತ್ತ ಸಾಗಿತ್ತು.
* ಹೋರಾಟಗಳಿಗೆ ಲೆಕ್ಕವೇ ಇಲ್ಲ
ಇಲ್ಲಿನ ಕಾಲೇಜ್ ಉದ್ಘಾಟನೆಗೆ ಒತ್ತಾಯಿಸಿದ ನಡೆಸಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಧರಣಿ, ಪ್ರತಿಭಟನಾ ಮೆರವಣಿಗೆ, ಪತ್ರ ಚಳವಳಿ, ತರಗತಿ ಬಹಿಷ್ಕಾರದ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಕೊನೆಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬೀರಪ್ಪ ಕಾಲೇಜಿಗೆ ಭೇಟಿ ನೀಡಿ, ಪರಿಶೀಲಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಉತ್ಸವ, ಅದ್ಧೂರಿ ಕಾರ್ಯಕ್ರಮಗಳಿಗೆ ಅನುದಾನದ ಬರವಿಲ್ಲ. ಬಡ ವಿದ್ಯಾರ್ಥಿಗಳಿಗೆ ಮಾತ್ರ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲವಾ? ಎಂಬುದಾಗಿ ಅವ್ಯವಸ್ಥೆಗೆ ಕಿಡಿಕಾರಿದ್ದರು.
* ಉದ್ಘಾಟನೆಗೆ ಸಂತಸ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉದ್ಘಾಟನೆಗೆ ಸಂತಸ ವ್ಯಕ್ತವಾಗಿದೆ. ಇಲ್ಲಿನ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ಬಿಎ, ಮತ್ತೊಂದೆಡೆ ನಗರದ ವಾಪಸಂದ್ರದ ಸಿಟಿಜನ್ ಕ್ಲಬ್ ನ ಕಟ್ಟಡದಲ್ಲಿ ಬಿ.ಕಾಂ ಮತ್ತು ಬಿಬಿಎಂ ತರಗತಿಗಳನ್ನು ನಡೆಸುವಿಕೆಯಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ತೊಂದರೆ ಅನುಭವಿಸಬೇಕಾಗಿತ್ತು. ಇನ್ನು ಶೌಚಗೃಹ ಸಮಸ್ಯೆ, ಸ್ಥಳದ ಅಭಾವ ಸೇರಿದಂತೆ ಹಲವು ಸಮಸ್ಯೆಗಳಿಗೆ ಹೈರಾಣರಾಗಬೇಕಾಗಿದ್ದು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ವಿದ್ಯಾರ್ಥಿಗಳ ಜತೆಗೆ ಉಪನ್ಯಾಸಕರು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದರು.