

ಮೈಸೂರು: ಜನರ ತೆರಿಗೆ ಹಣವನ್ನು ಕಾರ್ಪೋರೇಟ್ ಕಂಪನಿಗಳ ಹಿತಕ್ಕಾಗಿ ಆಳುವ ಸರ್ಕಾರಗಳು ಧಾರೆ ಎರೆಯುತ್ತಿವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು.ಬಸವರಾಜ್ ಆರೋಪಿಸಿದರು.
ಕೇಂದ್ರ, ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮೈಸೂರು ಜಿಲ್ಲಾ ಸಮಿತಿಯಿಂದ ನಗರದ ಗಾಂಧಿ ಚೌಕದಲ್ಲಿ ಭಾನುವಾರ ಆಯೋಜಿಸಿದ್ದ ರಾಜಕೀಯ ಪ್ರಚಾರಾಂದೋಲನದಲ್ಲಿ ಮಾತನಾಡಿದರು.
ದೇಶದ ಜನರು ವಾರ್ಷಿಕವಾಗಿ ಕೇಂದ್ರ ಸರ್ಕಾರಕ್ಕೆ 50 ಲಕ್ಷ ಕೋಟಿ ರೂ. ಹಾಗೂ ರಾಜ್ಯ ಸರ್ಕಾರಕ್ಕೆ 3 ರಿಂದ 4 ಲಕ್ಷ ಕೋಟಿ ರೂ. ಅನ್ನು ತೆರಿಗೆಯ ರೂಪದಲ್ಲಿ ನೀಡಿದ್ದಾರೆ. ಆದರೆ ಆಳುವ ಸರ್ಕಾರಗಳು ಆ ಹಣವನ್ನು ಕಾಪೋರೇಟ್ ಕಂಪನಿಗಳ ಹಿತಕ್ಕಾಗಿ ಧಾರೆ ಎರೆಯುತ್ತಿವೆ ಎಂದು ಟೀಕಿಸಿದರು.
ದೇಶದ ಗಣಿ, ಅರಣ್ಯ ಸೇರಿದಂತೆ ಇತರ ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಧಾರೆ ಎರೆಯುತ್ತಿದ್ದಾರೆ. ಇವು ರೈತ ಪರ, ಕಾರ್ಮಿಕರ ಪರ, ಬಡವರ ಪರ, ದಲಿತರ ಸರ್ಕಾರವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ನಿತ್ಯ ದೇಶದಲ್ಲಿ 10 ರಿಂದ 12 ಜನ ಹಸಿವಿನಿಂದ ಸಾಯುತ್ತಿದ್ದಾರೆ. ಇಂದರಿಂದಾಗಿ ಭಾರತ ಹಸಿವಿನ ಸೂಚ್ಯಂಕದಲ್ಲಿ 105ನೇ ಸ್ಥಾನದಲ್ಲಿದೆ. ಶೇ. 45ರಷ್ಟು ನಿರುದ್ಯೋಗ ಇದ್ದರೂ ದೇಶ ಹೇಗೆ 3ನೇ ದೊಡ್ಡ ಆರ್ಥಿಕತೆಯಾಗುತ್ತದೆ ಎಂದು ಪ್ರಶ್ನಿಸಿದರು.
60 ರಿಂದ 70 ಕೋಟಿ ಜನ ಪಡಿತರ ವ್ಯವಸ್ಥೆಯಿಂದ ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಅಂಗನವಾಡಿಗಳಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಇವರಿಗೆ ಕೊಳ್ಳುವ ಶಕ್ತಿ ಇಲ್ಲವಾಗಿದೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ಆಹಾರ ದೊರೆಯದೆ ಜನ ನರಳುತ್ತಿದ್ದಾರೆ ಎಂದರು.
ದೇಶದಲ್ಲಿ ದಿನದಿಂದ ದಿನಕ್ಕೆ ಶತಕೋಟಿ ಶ್ರೀಮಂತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಮತ್ತೊಂದೆಡೆ ಬಡವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ದೇಶದ ಶೇ.80 ಸಂಪತ್ತು ಕೇವಲ ಶೇ.10 ಜನರ ಬಳಿ ಇದ್ದರೆ, ಶೇ.90 ಜನರ ಬಳಿ ಶೇ.10ರಷ್ಟು ಸಂಪತ್ತು ಇಲ್ಲ. ಇದು ದೇಶದಲ್ಲಿನ ಅಸಮಾನತೆಯನ್ನು ಸೂಚಿಸುತ್ತಿದೆ ಎಂದರು.
ರಾಜ್ಯ ಸಮಿತಿ ಸದಸ್ಯೆ ಎಚ್.ಎಸ್.ಸುನಂದಾ ಮಾತನಾಡಿ, ದೇಶದ ಗಡಿಗಳಲ್ಲಿ ಸೈನಿಕರು ಸಾಯುತ್ತಿದ್ದಾರೆ. ಜನ ಸಾಮಾನ್ಯರು ಭಯೋತ್ಪಾದನೆಯಿಂದ ಸಾಯುತ್ತಿದ್ದಾರೆ. ಹಾಗಾದರೆ ಭಯೋತ್ಪಾದನೆ ಎಲ್ಲಿ ಕಡಿಮೆಯಾಗುತ್ತಿದೆ. ದೇಶದ ಒಳಗೆ ರೈತ ಕಾರ್ಮಿಕರು ಈ ಸರ್ಕಾರಗಳ ನೀತಿಗಳಿಂದ ಸಾಯುತ್ತಿದ್ದಾರೆ. ಹಾಗಾದರೆ ಈ ಸರ್ಕಾರಗಳ ಏನು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಅಂಗನವಾಡಿ, ಬಿಸಿಯೂಟ, ಯೋಜನೆಗಳಿಗೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ಹಣ ಕಡಿತ ಮಾಡುವ ಮೂಲಕ ಅಭಿವೃದ್ಧಿ ಕಡೆಗಣಿಸಲಾಗುತ್ತಿದೆ. ಇದಕ್ಕಾಗಿ ಜನರ ಆಕ್ರೋಶ ತಣಿಸಲು ಅವರ ಗಮನವನ್ನು ಬೇರೆಡೆ ಸೆಳೆಯಲು ಕೋಮುಗಲಭೆ, ಇನ್ನಿತರ ವಿಷಯಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ‌್ಯ ಮಾತನಾಡಿ, ಚುನಾವಣೆಯ ಸಮಯದಲ್ಲಿ ಮಾತ್ರ ಮೈಸೂರನ್ನು ನೆನೆಸಿಕೊಳ್ಳುವ ಆಳುವ ಸರ್ಕಾರಗಳು ನಂತರ ಮೈಸೂರನ್ನು ಮರೆಯುತ್ತಿವೆ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆ ತರುತ್ತಿಲ್ಲ, ಜಿಲ್ಲೆಯಲ್ಲಿ ಸರ್ಕಾರಿ ಕಾನೂನು, ಇಂಜಿನಿಯರಿಂಗ್ ಕಾಲೇಜಿಲ್ಲ. ಇದರ ಬಗ್ಗೆ ಯಾವುದೇ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದರು.
ಜಿಲ್ಲೆ ರೈತರ ಆತ್ಮಹತ್ಯೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ರೈತರ ಜೀವನಾಭಿವೃದ್ಧಿಯ ಕಡೆ ಗಮನ ಹರಿಸುತ್ತಿಲ್ಲ, ದಲಿತರಿಗೆ ಸ್ಮಶಾನವಿಲ್ಲ, ನಗರದ ಜನರ ಆರೋಗ್ಯದ ಕಾಳಜಿಗಾಗಿ ಸರ್ಕಾರಗಳು ವಾರ್ಡ್ ಕ್ಲಿನಿಕ್ ಹೆಸರಿಗಷ್ಟೇ ಸೀಮಿತವಾಗಿದೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲ ಪಡಿಸಬೇಕು, ಗೋಮಾಳ, ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಸಭೆಯ ಆರಂಭದಲ್ಲಿ ಅಗಲಿದ ಕೇರಳದ ಮಾಜಿ ಮುಖ್ಯಮಂತ್ರಿ ಅಚ್ಯುತಾನಂದನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಸವರಾಜ್, ವಿಜಯ್‌ಕುಮಾರ್, ಶಾಕುಂತಲಾ, ಮೆಹಬೂಬ್, ಲೀಲಾವತಿ ಇತರರು ಇದ್ದರು.