

ಬಸವನಬಾಗೇವಾಡಿ: ನಂದಿ ಸಂತತಿ ಉಳಿದರೆ ಮಾತ್ರ ಭಾರತದ ಸಂವಿಧಾನ ಉಳಿಯಲಿದೆ. ಆದ್ದರಿಂದ ಸರ್ಕಾರಗಳು ನಂದಿ ಸಂತತಿ ಉಳಿಸಿ ಬೆಳೆಸಲು ಮುಂದಾಗಬೇಕಿದೆ ಎಂದು ಕೃಷಿ ತಜ್ಞ ಬಸವರಾಜ ಬಿರಾದಾರ ಹೇಳಿದರು.
ಪಟ್ಟಣದ ಮೂಲ ನಂದೀಶ್ವರ ಬಸವೇಶ್ವರ ದೇವಸ್ಥಾನದಲ್ಲಿ ಕೃಷಿ ಪದವೀಧರರು ಪ್ರಾರಂಭಿಸಿರುವ ನಂದಿ ಕೂಗು ಅಭಿಯಾನ ಅಡಿಯಲ್ಲಿ ನಂದಿಗಾಗಿ ನಮ್ಮ ಮತದಾನ ಸಂಕಲ್ಪ ಯಾತ್ರೆ ಗುರುವಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದರು.
ನಂದಿ ಸಂತತಿ ಉಳಿದರೆ ಫಲವತ್ತಾದ ಭೂಮಿ ಉಳಿಯುತ್ತದೆ. ನಂದಿ ಸಂತತಿ ನಶಿಸಿದರೆ ಬರಡು ಭೂಮಿ, ಬಂಜರು ಭೂಮಿಯಾಗಿ ಮಾರ್ಪಡುವ ಕಾಲ ಸಮೀಪಿಸಲಿದೆ. ಎಲ್ಲರೂ ಇದನ್ನು ಅರಿತುಕೊಳ್ಳಬೇಕು. ನಂದಿ ಸಂತತಿ ಉಳಿಸಿ ಬೆಳೆಸುವುದಕ್ಕೆ ಹಾಗೂ ಯೋಜನೆ ಜಾರಿಗೊಳಿಸುವ ರಾಜಕೀಯ ನಾಯಕರಿಗೆ ನಂಬಿದ ದೈವದ ಸಾಕ್ಷಿಯಾಗಿ ಮತದಾನ ಮಾಡುವ ಸಂಕಲ್ಪ ಮಾಡುವ ಸಂಕಲ್ಪ ಯಾತ್ರೆಯನ್ನು ಮೇ 8 ರಿಂದ 12ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಸವ ಜಯಂತಿಯಂದು ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಾನದಿಂದ ಈ ಸಂಕಲ್ಪ ಯಾತ್ರೆ ಆರಂಭಿಸಿದ್ದು, ಬಸವ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಅವರ ಕರ್ಮ ಭೂಮಿ ಬಸವಕಲ್ಯಾಣ, ಐಕ್ಯಸ್ಥಳ ಕೂಡಲಸಂಗಮದವರೆಗೆ ಮೇ 8 ರಿಂದ 12ರ ವರೆಗೆ ನಂದಿಗಾಗಿ ನಮ್ಮ ಮತದಾನ ಸಂಕಲ್ಪ ಯಾತ್ರೆ ನಡೆಯಲಿದೆ. ಮಾರ್ಗದಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಈ ಯಾತ್ರೆಯ ಉದ್ದೇಶವನ್ನು ಜನತೆ ಮುಟ್ಟಿಸುವುದು. ಹಾಗೂ ನಂದಿಗಾಗಿ ಮತ ಮೀಸಲಿಡುವ ವಿಚಾರವನ್ನು ಒಬ್ಬೊಬ್ಬರ ಮನಸ್ಸಿನಿಂದ ಇನ್ನೊಬ್ಬರಿಗೆ ಹರಡುವಂತೆ ಮಾಡಿ ರಾಷ್ಟ್ರದ ಬಹುಜನರ ಮತವನ್ನು ನಂದಿ ಕೃಷಿ ಪುನಶ್ಚೇತನಕ್ಕಾಗಿ ಕ್ರೋಢಿಕರಿಸುವುದಾಗಿ ತಿಳಿಸಿದರು.
ಜೋಡೆತ್ತಿನ ಕೃಷಿ, ಉಳಿದರೆ ಮಣ್ಣು ಉಳಿಯುವುದು. ಮಣ್ಣು ಉಳಿದರೆ ಮಾತ್ರ ನಾಗರಿಕತೆಗಳು ಉಳಿಯಲು ಸಾಧ್ಯ. ನಮ್ಮ ಸಂಕಲ್ಪ ಯಾತ್ರೆಯ ಉದ್ದೇಶ ಅರಿತು ಎಲ್ಲರೂ ಪಕ್ಷಾತೀತವಾಗಿ ನಿರ್ಣಯ ಕೈಗೊಳ್ಳುವ ಮೂಲಕ ಮತದಾನದ ವೇಳೆ ನಂದಿ ಸಂರಕ್ಷಣೆ ಮಾಡುವ ಪ್ರತಿನಿಧಿಗಳಿಗೆ ತಮ್ಮ ಮತದಾನ ಮಾಡುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ನಂದಿಗಾಗಿ ನಮ್ಮ ಮತದಾನ ಎಂಬ ಸಂಕಲ್ಪ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಸುರೇಶ ಹಾರಿವಾಳ, ವಿವೇಕ ಬ್ರಿಗೇಡ್ ಮುಖ್ಯಸ್ಥ ವಿನೂತ ಕಲ್ಲೂರ, ರವಿಗೌಡ ಚಿಕ್ಕೊಂಡ, ನಿವೃತ್ತ ಕೃಷಿಧಿಕಾರಿ ಬಸವರಾಜ ಕೋನರೆಡ್ಡಿ, ಅರವಿಂದ ಕೌವಲಗಿ, ಎನ್. ಎನ್. ಅಂಗಡಿ, ಬಸಣ್ಣ ದೇಸಾಯಿ, ಡಾ. ಬಸವರಾಜ ಚವಾಣ್, ಚನ್ನಬಸು ಜಾಡರ, ಮಲ್ಲಪ್ಪ ಅಡಗಿಮನಿ, ರಾಮನಗೌಡ ಚಿಕ್ಕೊಂಡ, ಶಿವಾನಂದ ಮಾಲೂರು, ಮುರುಗೇಶ ಗೊಳಸಂಗಿ, ಬಸವರಾಜ ಸಿಂದಗಿ, ಅಭಿಷೇಕ ಬಿರಾದಾರ, ಬಸವರಾಜ ಸಂಗಮ, ಶೇಖರ ಗೊಳಸಂಗಿ, ಶಾಂತು ಪಡಶೆಟ್ಟಿ, ಪ್ರಭು ಡಂಬಳ ಇತರರಿದ್ದರು.