

ಹರಿಹರ: ಆಳುವ ಸರ್ಕಾರಗಳು ಮೊದಲು ರೈತರ ಹಿತ ಕಾಪಾಡುವಂತಹ ಕೆಲಸ ಮಾಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಶ್ರೀಗಳು ಕರೆ ನೀಡಿದರು.
ನಗರದ ಶ್ರೀ ಜಪಂವಿ ವಿದ್ಯಾಪೀಠದ ಆವರಣದಲ್ಲಿ ಶನಿವಾರ ನಡೆದ ಸಮನ್ವಯ ಸಿರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಜ್ಯದಲ್ಲಿ ಕಾವೇರಿ ಮತ್ತು ಭದ್ರಾ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಣಯ ಖಂಡಿಸಿ ಪ್ರತಿಭಟನೆ ಮತ್ತು ಬಂದ್ ಮಾಡಲಾಗುತ್ತಿದೆ. ಆಳುವವರು ಮೊದಲು ರಾಜ್ಯದ ಹಿತ ಕಾಪಾಡುವಂತಹ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದರು.
ನೆಲ, ಜಲ, ಅನ್ನ ಯಾರೊಬ್ಬರ ಸ್ವತ್ತಲ್ಲ. ಆದರೆ ಸ್ವಂತಕ್ಕೆ ಕೊರತೆಯಾದ ಸಂದರ್ಭದಲ್ಲಿ ಮೊದಲು ನಮ್ಮನ್ನು ನೋಡಿಕೊಳ್ಳಬೇಕೆ ವಿನಃ ದೂರದವರನ್ನಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು.
ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದ ರೈತರ ಹಿತ ಕಾಯುವ ಬಗ್ಗೆ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ನೀರು, ಅನ್ನ, ಮಾತು ಇವುಗಳು ಜೀವನದ ನಿಜವಾದ ಮುತ್ತುಗಳು. ಇದರ ಬಗ್ಗೆ ಅರಿವಿಲ್ಲದವರು ಕಲ್ಲಿನ ಸಂಧಿಯಲ್ಲಿ ಸಿಗುವ ವಸ್ತುಗಳನ್ನು ಮುತ್ತುಗಳೆಂದು ತಿಳಿದಿದ್ದಾರೆ ಎನ್ನುವ ಮೂಲಕ ನೀರು, ಅನ್ನ ಮಾತುಗಳ ಮಹತ್ವ ತಿಳಿಸಿದರು.
ಲಿಂ.ವಾಗೀಶ ಪಂಡಿತಾರಾಧ್ಯರ ಹೆಸರಿನಲ್ಲಿ ಸಾಂಸ್ಕೃತಿಕ ಬೆಳವಣಿಗೆಗೆ ಪ್ರಾತಿನಿಧ್ಯ ನೀಡಿದಂತಹ ಗಣ್ಯರಿಗೆ ಹಾಗೂ ಸಮಾಜದಲ್ಲಿ ಉತ್ತಮ ಸೇವೆ ಮಾಡಿದವರನ್ನು ಗುರುತಿಸಿ ಸಮನ್ವಯ ಸಿರಿ ಪ್ರಶಸ್ತಿ ನೀಡಲಾಗುತ್ತಿದೆ, ಕೋವಿಡ್ ಕಾರಣಗಳಿಂದ ಕಳೆದ ಎರಡು ವರ್ಷ ಪ್ರಶಸ್ತಿ ನೀಡಲಾಗಲಿಲ್ಲ. ಕಾರಣ ಈ ಬಾರಿ ಮೂವರು ಸಾಧಕರಿಗೆ ನೀಡಲಾಗುತ್ತಿದೆ ಎಂದರು.
ಶ್ರೀಪತಿ ಪಂಡಿತಾರಾಧ್ಯರ ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟನೆಯಾಗಿದ್ದು, ಈ ಭಾಗದ ಪ್ರತಿಭಾವಂತ ಯುವಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಸಮಾಜದಲ್ಲಿ ದುಡ್ಡು ಕೊಟ್ಟು ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ಪದವಿ ಪಡೆಯುತ್ತಿರುವುದರಿಂದ ಅವುಗಳ ಮೌಲ್ಯಕ್ಕೆ ಕುತ್ತು ಬಂದಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಸಾಧಕನ್ನು ಹುಡುಕಿಕೊಂಡು ಪ್ರಶಸ್ತಿಗಳು ಬರಬೇಕು. ಆದರೆ ಇಂದು ಪ್ರಶಸ್ತಿ ಗಳನ್ನು ಬೆನ್ನತ್ತಿ ಪಡೆಯುತ್ತಿದ್ದರೆ ಇದು ಒಳ್ಳೆಯ ಬೆಳವಣಿಗೆಯಲ್ಲ, ಹರಿಹರದಲ್ಲಿ ಶ್ರೀಶೈಲ ಶ್ರೀಗಳ ಸಮ್ಮುಖದಲ್ಲಿ ನೀಡುತ್ತಿರುವ ಸಮನ್ವಯ ಸಿರಿ ಪ್ರಶಸ್ತಿಯು ಇದರಿಂದ ಹೊರತಾಗಿದೆ ಎಂದರು.
ಶ್ರೀಪತಿ ಪಂಡಿತಾರಾಧ್ಯ ಸ್ಪರ್ಧಾತ್ಮಕ ಪರಿಕ್ಷಾ ತರಬೇತಿ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಬಿ.ಪಿ.ಹರೀಶ್, ಶ್ರೀಶೈಲ ಪೀಠದ ಲಿಂ.ವಾಗೀಶ ಪಂಡಿತಾರಾಧ್ಯ ಶ್ರೀಗಳ ದೂರದೃಷ್ಟಿ ಫಲವಾಗಿ ಆರಂಭವಾದ ಈ ಶಿಕ್ಷಣ ಸಂಸ್ಥೆ ಇಂದು ಹಲವರ ಬಾಳಿನಲ್ಲಿ ಬೆಳಕು ತಂದಿದೆ ಎಂದರು.
ಆರಂಭವಾದ ಸ್ಪರ್ಧಾತ್ಮಕ ಪರಿಕ್ಷಾ ತರಬೇತಿ ಕೇಂದ್ರ ಈ ಭಾಗದ ಪ್ರತಿಭಾವಂತ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಹರಪನಹಳ್ಳಿ ತೆಗ್ಗಿನ ಮಠದ ವರಸಜ್ಯೋಜಾತ ಶ್ರೀ, ಕೊಣಂದೂರು ಶ್ರೀ, ಅಂಬಿಕಾ ನಗರದ ಶ್ರೀಗಳು, ಸಂಸ್ಥೆಯ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ಪುಣೆಯ ರಾಚಯ್ಯ ಹೀರೆಮಠ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಂಜುನಾಥ ಕುರ್ಕಿ, ಸಂಸ್ಥೆಯ ನಿರ್ದೇಶಕರುಗಳಾದ ಡಿ.ಜಿ.ಶಿವಾನಂದಪ್ಪ, ಎನ್.ಎಚ್.ಪಾಟೀಲ್, ಎನ್.ಎಂ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಆರ್.ಟಿ.ಪ್ರಶಾಂತ ದುಗ್ಗತ್ತಿಮಠ ಹಾಗೂ ಇತರರರು ಉಪಸ್ಥಿತರಿದ್ದರು.
ಮೂವರು ಗಣ್ಯರಿಗೆ ಪ್ರಶಸ್ತಿ:
ಸಮನ್ವಯ ಸಿರಿ ರಾಷ್ಟ್ರೀಯ ಪ್ರಶಸ್ತಿಯನ್ನು ಶೇಖರಗೌಡ ಮಾಲಿ ಪಾಟೀಲ್ (2021ನೇ ಸಾಲಿಗೆ), ಟಿ.ಎಂ. ಚಂದ್ರಶೇಖರಯ್ಯ (2022ನೇ ಸಾಲಿಗೆ) ಹಾಗೂ ಅಥಣಿ ವೀರಣ್ಣಗೆ 2023 ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮನ್ವಯ ಸಿರಿ ಪ್ರಶಸ್ತಿಯೊಂದಿಗೆ 25 ಸಾವಿರ ನಗದನ್ನು ಕೊಟ್ಟಿದ್ದಾರೆ. ಇದಕ್ಕೆ ಇನ್ನೂ 50 ಸಾವಿರ ಸೇರಿಸಿ ನಾನು ಪೀಠಕ್ಕೆ ನೀಡುತ್ತೇನೆ.
ಅಥಣಿ ವೀರಣ್ಣ, ಉದ್ಯಮಿ