'ಸರ್ಕಾರಗಳು ಸಂಕಷ್ಟದಲ್ಲಿರುವ ಕಲಾವಿದರ ಗುರುತಿಸಿ ಸೌಲಭ್ಯ ಕಲ್ಪಿಸಲಿ'

3 A
Published on

ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸುತ್ತಿಲ್ಲ ಎಂದು ನಗರಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ರಂಗಭೂಮಿ ವೃತ್ತಿ ಕಲಾವಿದೆಯರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಎಸ್.ಎಸ್.ಗಾಯತ್ರಿ ನೆನಪಿನ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.

ನಾಟಕ ಕಲಾವಿದರು ಸಂಕಷ್ಟದಲ್ಲಿದ್ದು, ಪಿಂಚಣಿ, ವಸತಿ ಸೌಲಭ್ಯಗಳು ಇಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರ ಕಲಾವಿದರನ್ನು ಗುರುತಿಸುತ್ತಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಅವರನ್ನು ಗುರುತಿಸಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಜಲವಾಸುದೇವ ನಾಟಕ ಸಭಾ ಟ್ರಸ್ಟ್ ಅಧ್ಯಕ್ಷ ಓಂ ಶ್ರೀನಿವಾಸ್ ಮಾತನಾಡಿ, ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 30 ವರ್ಷಗಳಿಂದ ನಾಟಕಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

ರಂಗಕಲಾವಿದೆ ಕೆ.ಎಂ.ಗಿರಿಜಮ್ಮ ಅವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷೆ ಎಸ್. ವಸಂತಕೃಷ್ಣ, ಕಾರ್ಯದರ್ಶಿ ಎನ್.ಲೀಲಾವತಿ, ಜಲವಾಸುದೇವ ನಾಟಕ ಸಭಾ ಟ್ರಸ್ಟ್‌ನ ಜಿ. ಸತ್ಯನಾರಾಯಣ, ಕಲಾವಿದರಾದ ಬಿ.ಎ. ಶಾಂತಾದೇವಿ, ಇಂದ್ರಮ್ಮ ಇತರರು ಇದ್ದರು. ಉದ್ಘಾಟನೆ ಕಾರ್ಯಕ್ರಮದ ಬಳಿಕ ಜಲವಾಸುದೇವ ನಾಟಕ ಸಭಾ ಟ್ರಸ್ಟ್ ನೇತೃತ್ವದಲ್ಲಿ ಮಕ್ಕಳಿಂದ ಶ್ರೀಕೃಷ್ಣಲೀಲೆ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net