ಜೀವ ಉಳಿಸುವುದೇ ಸರ್ಕಾರದ ಆದ್ಯತೆ

Government's priority is to save lives
Published on

ಮಡಿಕೇರಿ:

ರಾಜ್ಯದಲ್ಲಿ ಸಿಡಿಲು ಬಡಿತದಿಂದ 8, ಮರ ಬಿದ್ದು 6, ಮನೆ ಕುಸಿತದಿಂದ 14, ನೀರಿಗೆ ಇಳಿದು 12, ಭೂಕುಸಿತದಿಂದ 8 ಸೇರಿದಂತೆ ಒಟ್ಟು 48 ಜನ ಪ್ರಾಕೃತಿಕ ವಿಕೋಪ ಸಂಬAಧಿ ಘಟನೆಗಳಿಂದ ಪ್ರಾಣ ಕಳೆದು ಕೊಂಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ. ಹಾರಂಗಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಸಹಿಸಲು ಸಾಧ್ಯವೇ ಇಲ್ಲ. ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುವವರು ನಮ್ಮನ್ನು ಬೈಯ್ದುಕೊಂಡರೂ ಚಿಂತೆ ಇಲ್ಲ. ಅವರನ್ನು ಕೂಡಲೇ ಸ್ಥಳಾಂತರಿಸಿ, ಅವರ ಜೀವ ಉಳಿಸಿ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗುವುದು.

ಅಪಾಯ ಸಂಭವಿಸಬಹುದಾದ ಸಾಧ್ಯತೆಗಳಿರುವ ಸ್ಥಳಗಳಲ್ಲಿ ವಾಸಿಸುವ ಜನರನ್ನು ನಿಷ್ಠುರವಾಗಿ ಬೇರೆ ಕಡೆಗೆ ಬಲವಂತವಾಗಿ ಸ್ಥಳಾಂತರ ಮಾಡಬೇಕು. ಪ್ರಾಣ ಹೋದ ಮೇಲೆ ಪರಿಹಾರ ಕೊಡಲು ನಾವಿಲ್ಲ. ಪ್ರಾಣ ಉಳಿಸಲು ನಾವಿದ್ದೇವೆ. ಎಷ್ಟು ಸಾಧ್ಯವೋ ಅಷ್ಟು ಜನರ ಪ್ರಾಣಗಳನ್ನು ಉಳಿಸಬೇಕಿದೆ. ಅದಕ್ಕಾಗಿ ಕೆಲವೊಂದು ನಿಷ್ಠುರ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಹೊಳೆ ಉಕ್ಕಿ ಹರಿಯುವಾಗ ಮೀನು ಹಿಡಿಯಲು ಹೋದರೆ, ಮೋಜು ಮಸ್ತಿ ಮಾಡಲು ಹೋದವರಿಗೆ ಲಾಠಿಯ ರುಚಿ ತೋರಿಸಬೇಕು. ಜನರಿಗೂ ತಮ್ಮ ಜೀವ ಉಳಿಸಿಕೊಳ್ಳುವ ಜವಾಬ್ದಾರಿ ಇದೆ ಎನ್ನುವುದನ್ನು ಅವರು ಮರೆಯಬಾರದು. ಹಾಗಾಗಿ, ಇನ್ನು ಮುಂದೆ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.

ವಯನಾಡು ದುರಂತ ನಮಗೆಲ್ಲ ಎಚ್ಚರಿಕೆಯ ಗಂಟೆ. 2018ರಲ್ಲಿ ಕೊಡಗಿನಲ್ಲಿ ಆದ ಘಟನೆಯ ಮುಂದುವರಿದ ಭಾಗ ವಯನಾಡಿನಲ್ಲಿ ಆಗಿದೆ. ಪರಿಸರ ತಾಳ್ಮೆಗೂ ಇತಿಮಿತಿಗಳಿವೆ. ಎಗ್ಗಿಲ್ಲದ ಭೂಪರಿವರ್ತನೆ ಮೂಲಕ ನಾವೇ ನಮ್ಮ ಕಾಲ ಮೇಲೆ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಜನರು ಮಿತಿಗಳನ್ನು ದಾಟಬಾರದು. ಸರ್ಕಾರಗಳೂ ಪರಿಸರ ಉಳಿಸುವ ಕಡೆಗೆ ಚಿಂತನೆ ನಡೆಸದೇ ಇದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.

ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ರಾಜ್ಯದಲ್ಲಿ ಎಲ್ಲೆಲ್ಲಿ ಭೂಕುಸಿತ ಸಂಭವಿಸಬಹುದು ಎಂಬ ಮಾಹಿತಿ ನೀಡಿದ್ದಾರೆ. ಅದನ್ನು ಸಂಬAಧಿಸಿದ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಅವರಿಂದ ಪ್ರಸ್ತಾವ ತರಿಸಿಕೊಂಡು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಈ ವರ್ಷ 100 ಕೋಟಿ ರೂ., ಮುಂದಿನ ವರ್ಷ 200 ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ತಿಳಿಸಿದರು.


ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೃಷ್ಣ ಬೈರೇಗೌಡ, ಪ್ರಹ್ಲಾದ್ ಜೋಷಿ ಮತ್ತು ಎಚ್.ಡಿ. ಕುಮಾರಸ್ವಾಮಿ ರಾಜ್ಯಪಾಲರಿಗೆ ಅರ್ಜಿಗಳನ್ನು ಕೊಟ್ಟು ಸರ್ಕಾರಕ್ಕೆ ಪತ್ರಗಳನ್ನು ಬರೆಸಿ ಏನಾದರೂ ಮಾಡಿ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಸರ್ಕಾರ ಬುಡಮೇಲು ಮಾಡಲು ಹೊರಟರೆ ನಾವು ನ್ಯಾಯಾಲಯದ ಕದ ತಟ್ಟುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net