ಗ್ರಾಮೀಣ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸರ್ಕಾರದ ಆದ್ಯತೆ

kdr5
Published on

ಕಡೂರು: ರಾಜ್ಯ ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲೂಕಿನ ಕಾಮನಕೆರೆ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ವಸತಿ ಶಾಲೆ ಕುಂದುಕೊರತೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ವಸತಿ ಶಾಲೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಲು ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಮೇಲ್ವಿಚಾರಕರು ಮತ್ತು ಬೋಧಕವರ್ಗ ಶ್ರಮಿಸಬೇಕಿದೆ. ಮಕ್ಕಳ ವಿದ್ಯಾಭ್ಯಾಸದ ಜತೆಗೆ ಕಾಳಜಿಯು ಮುಖ್ಯ ಎಂದರು.

ವಸತಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕಂಪ್ಯೂಟರ್ ಟ್ಯಾಬ್ ನೀಡಿದ್ದರೂ ಉಪನ್ಯಾಸಕರು ಮಕ್ಕಳಿಗೆ ನೀಡಿಲ್ಲ. ಕ್ರೀಡಾಚಟುವಟಿಕೆಗೆ ಸಹಕರಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆನಂದ್, ವಿದ್ಯಾರ್ಥಿಗಳಿಗೆ ಮೊದಲು ಟ್ಯಾಬ್ ನೀಡಿ. ಕ್ರೀಡೆಗೂ ಶಿಕ್ಷಣದಷ್ಟೇ ಆದ್ಯತೆ ನೀಡಬೇಕು. ಕ್ರೀಡಾಚಟುವಟಿಕೆ ಹೆಚ್ಚು ತೊಡಗಿಸಿಕೊಂಡಾಗ ಬೌದ್ಧಿಕ ಸಾಮಾರ್ಥ್ಯ ವೃದ್ಧಿಯಾಗಲಿದೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಾಮನಕರೆ ಗ್ರಾಪಂ ಅಧ್ಯಕ್ಷ ಶೇಖರಪ್ಪ, ವಸತಿ ನಿಲಯದ ಮೇಲ್ವಿಚಾರಕಿ ವೀಣಾ, ಮುಖಂಡ ಕಾಮನಕೆರೆ ಪಂಚಾಕ್ಷರಿ, ವಸತಿ ಶಾಲೆ ಶಿಕ್ಷಕರಾದ ಅಭಿಷೇಕ್, ಜಗದೀಶ್, ಯಲ್ಲಪ್ಪ, ಸಂತೋಷ್, ಕಡೂರು , ಪಿಎಸೈಗಳಾದ ಸಜಿತ್‌ಕುಮಾರ್, ತಿಪ್ಪೇಶ್, ಬಿ.ಟಿ.ಚಂದ್ರಶೇಖರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net