ತಿಪ್ಪಗೊಂಡನಹಳ್ಳಿ ಜಲಾಶಯ ಪುನರುಜ್ಜೀವಕ್ಕೆ ಸರ್ಕಾರ ನಿರ್ಲಕ್ಷ್ಯ: ಎಂ.ಎನ್. ತಿಪ್ಪೇಸ್ವಾಮಿ ಬೇಸರ ಬೇಸರ

jala
Published on

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನರುಜ್ಜೀವಗೊಳಿಸಲು ಇಸ್ರೋ ಸೇರಿ ಹಲವು ಸಂಸ್ಥೆಗಳು ವಿಸ್ತಾರವಾದ ವರದಿ ಕೊಟ್ಟಿದ್ದರೂ ರಾಜ್ಯ ಸರ್ಕಾರ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಬೆಂಗಳೂರು ಜಲ ಮಂಡಳಿ ನಿವೃತ್ತ ಅಭಿಯಂತರ ಎಂ.ಎನ್. ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ತಿಪ್ಪಗೊಂಡನಹಳ್ಳಿ ಉಳಿಸಿ ಹೋರಾಟ ಸಮಿತಿ, ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ತಿಪ್ಪಗೊಂಡನಹಳ್ಳಿ ಜಲಾಶಯ ರಕ್ಷಿಸಿ ಬೆಂಗಳೂರಿನ ಉಳಿಸಿ’ವಿಚಾರ ಸಂಕಿರಣದಲ್ಲಿ ಮಾತನಾಡಿದರು.

2000ರಲ್ಲಿ ಜಲಾಶಯದ ಪುನರುಜ್ಜೀವನಕ್ಕೆ ಹಲವು ವರದಿಗಳು ಸಲ್ಲಿಕೆಯಾಗಿವೆ. ಆದರೂ, ಆಡಳಿತ ಸರ್ಕಾರಗಳು ಇದನ್ನು ನಿರ್ಲಕ್ಷ್ಯ ಮಾಡಿದೆ. 1930ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ನಿರ್ಮಾಣವಾಗಿತ್ತು. ಅರ್ಕಾವತಿ ನದಿಯಿಂದ 150 ಎಂಎಲ್‌ಡಿ, ಹೆಸರಘಟ್ಟ ಜಲಾಶಯದಿಂದ 50 ಎಂಎಲ್‌ಡಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಈ ಜಲಾಶಯಕ್ಕೆ ಇತ್ತು. 1974ರಲ್ಲಿ ಕಾವೇರಿ 1ನೇ ಹಂತದ ಯೋಜನೆ ಆರಂಭವಾಗಿ ಬೆಂಗಳೂರಿಗೆ ನೀರಿನ ಸರಬರಾಜು ಮಾಡುವ ವ್ಯವಸ್ಥೆಯಾಗಿತ್ತು. ಜಲಮಂಡಳಿ ಪ್ರತಿ ವರ್ಷವೂ ತೆಪ್ರೋತ್ಸವವನ್ನು ಮಾಡಲಾಗುತ್ತಿತ್ತು. ಆದರೆ, 1990ರಿಂದ ಜಲಾಶಯವು ಸಂಪೂರ್ಣ ಬತ್ತಿ ಹೋಗಿದೆ ಎಂದರು.

ನಾಗರಿಕ ಹೋರಾಟಗಾರ್ತಿ ಕ್ಯಾತ್ಯಾಯಿನಿ ಮಾತನಾಡಿ, ನೀರಿನ ಲಭ್ಯತೆ ಸಾಮರ್ಥ್ಯ ಮೇಲೆ ನಗರಗಳು ಅಭಿವೃದ್ಧಿಯಾಗಬೇಕಿದೆ. ಆದರೆ, ನೀರಿನ ಲಭ್ಯತೆಯ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರನ್ನು ಅಭಿವೃದ್ಧಿಗೆ ಮುಂದಾಗಿರುವುದು ರಾಜಕಾರಣಿಗಳ ದುರಾಸೆ ಪರಮಾವಧಿಯಾಗಿದೆ ಎಂದರು.

ಪರಿಸರ ಹೋರಾಟಗಾರ ರಾಮ್ ಪ್ರಸಾದ್ ಮಾತನಾಡಿ, ಸರ್ಕಾರದ ನೀತಿಗಳ ವಿರುದ್ಧ ನ್ಯಾಯಾಲಯಗಳು ಅನೇಕ ಬಾರಿ ಮಾತನಾಡಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಸೂದೆಯಲ್ಲಿ ಕೆರೆಗಳನ್ನು ರಕ್ಷಿಸುವ 62 ನಾಗರಿಕ ಗುಂಪುಗಳನ್ನು ಸಂಪೂರ್ಣ ಹೊರಗಿಟ್ಟಿರುವುದು ದುರದೃಷ್ಟಕರ ಸಂಗತಿ. ನೂತನ ಮಸೂದೆಯಲ್ಲಿ ಉದ್ದೇಶಪೂರ್ವಕವಾಗಿ ನಾಗರಿಕರ ಸಹಭಾಗಿತ್ವ ಮೊಟಕುಗೊಳಿಸಲಾಗಿದೆ ಎಂದರು.

ಮಳೆ ನೀರು ತಜ್ಞ ವಿಶ್ವನಾಥ್, ಸಮಿತಿ ಸಂಚಾಲಕ ಶಶಿಧರ್ ಆರಾಧ್ಯ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net