

ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿ ಯೋಜನೆಯ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಶುದ್ದೀಕರಿಸುವುದರ ಬಗ್ಗೆ ನಿರ್ಲಕ್ಷ್ಯ ಅಭಿಪ್ರಾಯ ವ್ಯಕ್ತಪಡಿಸಿರುವುದರ ಜತೆಗೆ ಹೋರಾಟಗಾರರ ವಿಚಾರದಲ್ಲಿ ರಾಜಕೀಯ ವಿರೋಧ ಎಂಬ ಹೇಳಿಕೆ ನೀಡಿರುವುದಕ್ಕೆ ನೀರಾವರಿ ಹೋರಾಟ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ ಎರಡು ವರ್ಷದೊಳಗೆ ಎತ್ತಿನಹೊಳೆ ಯೋಜನೆಯಡಿ ಅವಿಭಜಿತ ಕೋಲಾರ ಜಿಲ್ಲೆಗೆ ನೀರು ಹರಿಸುವ ಭರವಸೆ ಈಡೇರಿಸುವಲ್ಲಿ ವಿಫಲರಾದರೆ ಪಕ್ಷಕ್ಕೆ ಜನರ ವೋಟ್ ಹಾಕಿಸಿಕೊಳ್ಳದ ಸವಾಲನ್ನು ಸ್ವೀಕರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒತ್ತಾಯಿಸಿದೆ.
ರಾಜ್ಯ ಸರ್ಕಾರಗಳು ಈ ಭಾಗದಲ್ಲಿ ಸಮಗ್ರ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ವೈಜ್ಞಾನಿಕ ವರದಿಗಳನ್ನು ತಳ್ಳಿ ಹಾಕಿ, ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಚಿಕ್ಕಬಳ್ಳಾಪುರ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾನದಂಡಗಳು, ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳ ಶಿಫಾರಸ್ಸಿನಂತೆ ತ್ಯಾಜ್ಯ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಿ ಕೆರೆಗಳಿಗೆ ಹರಿಸಬೇಕು. ಆದರೆ, ಇಲ್ಲಿ ಎರಡನೇ ಹಂತದಲ್ಲಿಯೇ ಸಮರ್ಪಕ ಸಂಸ್ಕರಣೆಯಾಗುತ್ತಿಲ್ಲ. ಎಚ್.ಎನ್.ವ್ಯಾಲಿ ನೀರಿನಿಂದ ಕೆರೆಗಳು ಹಾಗೂ ಅಂತರ್ಜಲ ಮಟ್ಟವು ಕಲುಷಿತಗೊಳ್ಳುತ್ತಿದ್ದು ಇದರ ಬಗ್ಗೆ ವ್ಯಾಪಕ ಆತಂಕ ವ್ಯಕ್ತವಾಗುತ್ತಿದೆ. ಇದರ ಅರಿವಿದ್ದರೂ ಜನಪ್ರತಿನಿಧಿಗಳು ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ನೀರಿನ ಲಭ್ಯವಾಗದ ಎತ್ತಿನಹೊಳೆ ಯೋಜನೆ ಜಾರಿಯ ಬಗ್ಗೆ ಚರ್ಚೆಯಾಗಿದೆ. ಜತೆಗೆ ಹೆಚ್ಚುವರಿ ಅನುದಾನ ಮಂಜೂರಾತಿಗೆ ತೀರ್ಮಾನಿಸಲಾಗಿದೆ. ಇದೆಲ್ಲವೂ ಹಣವನ್ನು ಲೂಟಿ ಹೊಡೆಯುವ ಕೆಲಸ. ಇನ್ನೂ ವ್ಯಾಲಿ ನೀರಿನ ಮೂರನೇ ಹಂತದ ಶುದ್ದೀಕರಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಒಲವು ವ್ಯಕ್ತಪಡಿಸದೇ ಹೋರಾಟಗಾರರ ವಿರುದ್ಧವೇ ತಿರುಗಿ ಬೀಳುವ ಹೇಳಿಕೆಯನ್ನು ನೀಡುತ್ತಿರುವುದು ದುರದೃಷ್ಟಕರ. ಇದಕ್ಕೆ ಬೃಹತ್ ಜನಾಂದೋಲನ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಉಪಾಧ್ಯಕ್ಷ ಮಳ್ಳೂರು ಹರೀಶ್, ಮುಖಂಡರಾದ ಎಸ್.ಲಕ್ಷ್ಮಯ್ಯ, ಉಷಾ, ಲಕ್ಷ್ಮೀನಾರಾಯಣ್, ವಿ.ರವಿಕುಮಾರ್, ತಿಪ್ಪೇನಹಳ್ಳಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.
*ಶಾಸಕರೇ ಮಾತು ಉಳಿಸಿಕೊಳ್ಳಿ
ನೀರಾವರಿ ಹೋರಾಟದಲ್ಲಿ ಭಾಗಿಯಾಗಿದ್ದ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಎಚ್.ಎನ್.ವ್ಯಾಲಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಜತೆಗೆ ಮೂರನೇ ಹಂತದ ಶುದ್ದೀಕರಣಕ್ಕೆ ಆಗ್ರಹಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಸುಮ್ಮನಿರುವುದು ಬೇಸರ. ಕ್ಷೇತ್ರದ ಜನರಿಗೆ ಆಂಬ್ಯುಲೆನ್ಸ್ ವಾಹನಗಳನ್ನು ಒದಗಿಸುವುದಕ್ಕಿಂತಲೂ ರೋಗಿಗಳ ಸಂಖ್ಯೆ ಹೆಚ್ಚಳವಾಗದಂತೆ ಪ್ರಮುಖವಾಗಿ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿ ಎಂದು ರೈತ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಒತ್ತಾಯಿಸಿದ್ದಾರೆ.