

ಮೈಸೂರು: ನಿರುದ್ಯೋಗ ಪ್ರಮಾಣ ಗಂಭೀರವಾಗಿ ಹೆಚ್ಚುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಇರುವ ಉದ್ಯೋಗ ಕಸಿದುಕೊಳ್ಳುವ ಕೆಲಸ ಆಗುತ್ತಿದೆ. ನಿರುದ್ಯೋಗ ಹೋಗಲಾಡಿಸುವುದು ಈಗ ದೊಡ್ಡ ಸಮಸ್ಯೆ, ಸವಾಲಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.
ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದಿಂದ ನಗರದ ಗಾನಭಾರತಿ ಸಂಗೀತ ಸಭಾದಲ್ಲಿ ಶನಿವಾರ ಆಯೋಜಿಸಿದ್ದ ನಿರುದ್ಯೋಗ, ಕಡಿಮೆ ಉದ್ಯೋಗ ಮತ್ತು ಉದ್ಯೋಗರಹಿತ ಅಭಿವೃದ್ಧಿ ವಿಷಯ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.65 ಜನ ದುಡಿಯುವವರಿದ್ದಾರೆ. ಆದರೆ ದುಡಿಯಲು ಸಿದ್ಧರಿರುವರಿಗೆ ವಿದ್ಯಾರ್ಹತೆ ಮತ್ತು ಕೌಶಲಕ್ಕೆ ಸರಿಸಮನಾದ ಉದ್ಯೋಗ ಸಿಗುತ್ತಿಲ್ಲ. ಒಂದು ಕಡೆ ರೈತರ ಭೂಮಿ ಕಸಿದುಕೊಳ್ಳಲಾಗುತ್ತಿದೆ. ಕೈಗಾರಿಕೆಗಳಿಂದಲೂ ಕಾರ್ಮಿಕರನ್ನು ಹೊರ ನೂಕಲಾಗುತ್ತಿದೆ. ಇರುವ ಅಲ್ಪ ಸ್ವಲ್ಪ ಉದ್ಯೋಗವನ್ನೂ ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಸಿಕೊಂಡು ನಿರ್ವಹಿಸಲಾಗುತ್ತದೆ. ಇದರಿಂದ ಸಹ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. ಇವುಗಳ ವಿರುದ್ಧ ಯುವಜನರು ಜಾಗೃತಗೊಳ್ಳಬೇಕು ಎಂದು ಹೇಳಿದರು.
ಯುವಜನರಿಗೆ ಅವರ ಅರ್ಹತೆಗೆ ಅನುಸಾರ ಉದ್ಯೋಗ ಸಿಗುತ್ತಿಲ್ಲ. ವಿವಿಧ ಖಾಸಗಿ ಕಂಪನಿಗಳಲ್ಲಿನ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ಅಪಾರವಾದ ಅವಕಾಶ ಇದೆ. ಆದರೆ ಉದ್ಯೋಗ ಸೃಷ್ಟಿಸುವಲ್ಲಿ ನಮ್ಮ ಸರ್ಕಾರಗಳು ವಿಫಲವಾಗುತ್ತಿದೆ. ಬಡತನ ಹೆಚ್ಚಾಗಿರುವ ಕಾರಣ ಜನಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆಂದು ತಮ್ಮ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿವೆ ಎಂದರು.
ಬಹುತೇಕರು ಸಂಬಳ ಪಡೆಯುವ ವಿವಿಧ ಕೆಲಸ ಬಿಟ್ಟು, ಸರ್ಕಾರ ಜಾರಿಗೆ ತಂದಿರುವ ಯೋಜನೆ ಮೂಲಕ ಸ್ವಯಂ ಉದ್ಯೋಗ ಆರಂಭಿಸುತ್ತಾರೆ. ಇದರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಸರ್ಕಾರಗಳು ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿವೆ. ಆದರೆ ಸ್ವಯಂ ಉದ್ಯೋಗ ನಡೆಸುವವರ ಆದಾಯ ಕಡಿಮೆ ಇದೆ ಎಂದು ತಿಳಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಮಾತನಾಡಿ, ನಿರುದ್ಯೋಗದ ಮೂಲ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಅಡಗಿದೆ. ಭಾರತ ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದು, ಪ್ರಕಾಶಿಸುತ್ತಿದೆ ಎನ್ನುವುದರಲ್ಲಿ ಅರ್ಥವಿಲ್ಲ. ದೇಶದ ಅಭಿವೃದ್ಧಿ ಕೇವಲ ರಸ್ತೆ, ಕಟ್ಟಡ ನಿರ್ಮಾಣವಲ್ಲ. ನಿರುದ್ಯೋಗ ಸಮಸ್ಯೆ ಕಡಿಮೆ ಇರಬೇಕು. ಆದರೆ ದೇಶದಲ್ಲಿ ನಿರುದ್ಯೋಗ ದರ ಕಾಡುತ್ತಿದೆ ಎಂದರು.
ವಿಮಾ ನಿಗಮ ನೌಕರರ ಸಂಘದ ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ನಾಗೇಶ್, ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ, ಸಂಚಾಲಕ ಎಸ್.ಶ್ರೀಧರ್, ಮುಖಂಡರಾದ ಬಾಲಾಜಿ ರಾವ್, ಉಮಾಪತಿ, ಸಿ.ಆರ್.ಕೃಷ್ಣಮೂರ್ತಿ ಇತರರು ಇದ್ದರು.