

ಸಿಂಧನೂರು: ರೈತರ ಆತ್ಮಹತ್ಯೆ ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಕೃಷಿಕರ ಪರವಾದ ಯೋಜನೆಗಳನ್ನು ಜಾರಿಗೆ ತರಲು ಮುಂದಾಗುತ್ತಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚುನ್ನಪ್ಪ ಪೂಜಾರಿ ಆರೋಪಿಸಿದರು.
ನಗರದ ಯಲಿಮಂಚಲಿ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಮುಖ್ಯ ಕಾರಣ ಕೃಷಿ ಉತ್ಪನ್ನಕ್ಕೆ ವೈಜ್ಞಾನಿಕ ಬೆಲೆ ಇಲ್ಲದಿರುವುದು. ಇದರಿಂದ ರೈತರು ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಸರ್ಕಾರ ರೈತರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ. ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುವ ಸರ್ಕಾರ, ರೈತರ ಒಳಿತಿಗಾಗಿ ಕಾರ್ಯಕ್ರಮ ರೂಪಿಸುತ್ತಿಲ್ಲ ಎಂದು ದೂರಿದರು.
ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಎಂ.ಸುಬೇದಾರ್ ಮಾತನಾಡಿ, ರೈತ ವಿರೋಧಿ ಕಾನೂನುಗಳಿಂದಾಗಿ ರೈತರ ಸಾಲ ದಿನದಿಂದ ದಿನಕ್ಕೆ ಬೆಳೆಯುತ್ತಾ ಇದೆ. ಕೃಷಿ ಉತ್ಪನ್ನ ಉತ್ಪಾದನೆ ಮಾತ್ರ ಜಾಸ್ತಿ ಆಗುತ್ತಿದೆ. ಆದರೆ, ರೈತರು ಶ್ರೀಮಂತರಾಗುವ ಬದಲು ಅತಿಯಾದ ರಸಗೊಬ್ಬರ, ಕ್ರಿಮಿನಾಶಕ ಕಳೆ ನಾಶಕ ಯಂತ್ರೋಪಕರಣಗಳ ದುಬಾರಿ ವೆಚ್ಚದಿಂದ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಎಂದರು.
ರಾಜ್ಯ ಕಾರ್ಯದರ್ಶಿಗಳಾದ ಶರಣಪ್ಪ ಮರಳಿ, ರಾಹುಲ್ ಕುಬಕಡ್ಡಿ, ಪ್ರಮುಖರಾದ ದಿನೇಶ ಶಿರವಾಳ, ರಾಕೇಶಗೌಡ ಪಾಟೀಲ್, ಅಮರೇಶ ಚಾಗಬಾವಿ, ಡಾ. ಸಂಗೀತ ಪಾಟೀಲ್, ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಾಗರ, ಕೊಪ್ಪಳ ಜಿಲ್ಲಾಧ್ಯಕ ಇಸ್ಮಾಯಿಲ್ ನಾಲಬಂದ್, ಬಾಗಲಕೋಟೆ ಜಿಲ್ಲಾ ಪ್ರಮುಖ ರಸೂಲ್‌ಸಾಬ್ ಕಮತಗಿ ಇತರರಿದ್ದರು.