ಜಯಂತಿ ಹೆಸರಿನಲ್ಲಿ ಸಮುದಾಯಗಳನ್ನು ಒಡೆಯುತ್ತಿರುವ ಸರ್ಕಾರಗಳು

ಹೇಮಗಿರಿಯ ಬಿಜಿಎಸ್ ಕೇಂದ್ರೀಯ ಶಿಕ್ಷಣ ಶಾಲೆಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು.
ಹೇಮಗಿರಿಯ ಬಿಜಿಎಸ್ ಕೇಂದ್ರೀಯ ಶಿಕ್ಷಣ ಶಾಲೆಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು.
Published on

ಕೆ.ಆರ್.ಪೇಟೆ: ಸರ್ಕಾರಗಳು ಸಮುದಾಯಗಳನ್ನು ಒಗ್ಗೂಡಿಸುವ ಬದಲು ಜಾತಿಗೊಂದು ಜಯಂತಿ, ನಿಗಮಗಳ ಸ್ಥಾಪನೆಗಳ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿವೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.

ತಾಲೂಕಿನ ಹೇಮಗಿರಿಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಾಖಾ ಮಠಕ್ಕೆ ಸೇರಿದ ಬಿಜಿಎಸ್ ಕೇಂದ್ರೀಯ ಶಿಕ್ಷಣ ಶಾಲೆಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾನ್ ಪುರುಷರು ಜಾತಿವಾದಿಗಳ ಹಿಡಿತಕ್ಕೆ ಸಿಲುಕಿದ್ದಾರೆ. ಇದೊಂದು ಸಾಮಾಜಿಕ ದುರಂತ. ಮುಂದಿನ ದಿನಗಳಲ್ಲಿ ಸರ್ಕಾರದ ಜಯಂತಿಗಳು ಸಮಾಜಕ್ಕೆ ಮಾರಕವಾಗಲಿವೆ. ಮಹನೀಯರ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು. ಕಾಯಕ ತತ್ವದ ಅಡಿಯಲ್ಲಿ ಸಮಾಜವನ್ನು ಕಟ್ಟುವ ಕೆಲಸವಾಗಬೇಕು ಎಂದರು.

ಒಂದು ಸರ್ಕಾರ ಮಾಡಬೇಕಾದ ಕೆಲಸಗಳನ್ನು ಮಠಗಳು ಮಾಡುತ್ತಿವೆ. ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಕನ್ನಡದ ತಳಹದಿ ಮೇಲೆ 35 ದೇಶ ಸುತ್ತುತ್ತಿದ್ದೇನೆ. ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಉಚಿತಗೊಳಿಸಿವೆ. ಆದರೆ, ಇಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಕೆಂಪೇಗೌಡರು ಸರ್ವ ಜನಾಂಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದವರು. ಕೃಷಿ-ಸಂಸ್ಕೃತಿಗೆ ಪೂರಕವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದರು. ಮಹನೀಯರ ಜಯಂತಿ ಇಂದು ಸಮಾಜಕ್ಕೆ ಹೊರೆಯಾಗುತ್ತಿವೆ. ಇದರ ಬಗ್ಗೆ ಎಲ್ಲರೂ ಕೂಡಿ ಮರುಚಿಂತನೆ ಮಾಡಬೇಕು ಎಂದರು.

ರಾಜ್ಯ ಒಕ್ಕಲಿಗರ ಸಂಘದಿಂದ ಕೆ.ಆರ್.ಪೇಟೆಯಲ್ಲಿ ನರ್ಸಿಂಗ್ ಕಾಲೇಜು ಹಾಗೂ ವಸತಿನಿಲಯ ಆರಂಭಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ನಾಡಪ್ರಭು ಕೆಂಪೇಗೌಡರನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಶಾಸಕ ಎಚ್.ಟಿ.ಮಂಜು ಮತ್ತು ಮಾಜಿ ಶಾಸಕ ಎಂ.ಪುಟ್ಟಸ್ವಾಮೀಗೌಡ ಅವರ ಪತ್ನಿ ಎಸ್.ಎನ್.ವಿಜಯಲಕ್ಷ್ಮೀ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ನೆಲ್ಲಿಗೆರೆ ಬಾಲು, ಆರ್‌ಟಿಒ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net