

ಕೆ. ಆರ್.ಪೇಟೆ: ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದ ಶಾಸಕರನ್ನು ಶಾಸಕರೇ ಅಲ್ಲ ಎಂದು ಪರಿಗಣಿದೆ ಎಂದು ಶಾಸಕ ಎಚ್.ಟಿ.ಮಂಜು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಿರುವ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯ ಜಿಲ್ಲೆಯ ಸಚಿವರನ್ನೊಳಗೊಂಡಂತೆ ಶಾಸಕರ ಸಭೆಯನ್ನು ಕರೆಯುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರನ್ನು ಸಭೆಗೆ ಕರೆದು ನನ್ನನ್ನು ಮಾತ್ರ ಆಹ್ವಾನಿಸದಿರುವುದು ಶಾಸಕನಾದ ನನಗೆ ಹಾಗೂ ಮತ ನೀಡಿದ ತಾಲೂಕಿನ ಎಲ್ಲ ಸಮಸ್ತ ಮತದಾರರಿಗೂ ಮಾಡುತ್ತಿರುವ ಅವಮಾನವಾಗಿರುತ್ತದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ರೂ. ಅನುದಾನ ನೀಡಿದ್ದು, ನನಗೆ ಮಾತ್ರ ಇಪ್ಪತ್ತೈದು ಕೋಟಿ ರೂ. ಅನುದಾನ ನೀಡಿ ನನ್ನನ್ನು ಮಲತಾಯಿಯ ಮಗನಂತೆ ನೋಡುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿಗಾಗಿ ಅನುದಾನ ಪಡೆಯಲು ಸಚಿವರ ಮನೆ ಹಾಗೂ ಕಚೇರಿಗಳಿಗೆ ಸಾಕಷ್ಟು ಬಾರಿ ಅಲೆದಾಡಿದ್ದೇನೆ. ಕೇವಲ ಭರವಸೆ ಬಿಟ್ಟರೆ ಅನುದಾನ ನೀಡುವಲ್ಲಿ ಸಚಿವರುಗಳೂ ಸಹ ಮನಸ್ಸು ಮಾಡುತ್ತಿಲ್ಲ. ಆದರೂ ನಾನು ಛಲ ಬಿಡದ ತ್ರಿವಿಕ್ರಮನಂತೆ ಹತ್ತಾರು ಬಾರಿ ಪತ್ರ ಹಾಗೂ ಮನವಿಗಳನ್ನು ನೀಡುತ್ತಾ ಬಂದಿದ್ದೇನೆ. ಅಭಿವೃದ್ಧಿಗಾಗಿ ನಾನು ಸಚಿವರುಗಳ ಬೆನ್ನತ್ತಿ ಅನುದಾನ ತಂದು ಅಭಿವೃದ್ಧಿಯ ಕೊರತೆ ನೀಗಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಕಳೆದ 4 ವರ್ಷಗಳ ಹಿಂದೆ ಪ್ರವಾಹದಿಂದ ಒಡೆದು ಹೋಗಿದ್ದ ಲೋಕನಹಳ್ಳಿ, ಹುಬ್ಬನಹಳ್ಳಿ, ಅಘಲಯ, ಮಾವಿನಕಟ್ಟೆಕೊಪ್ಪಲು, ಕೆರೆಗಳನ್ನು ಅಭಿವೃದ್ಧಿಪಡಿಸುವಂತೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಶಾಸಕನಾದ ಮೊದಲ ಅನುದಾನವನ್ನು ಅಘಲಯ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದೇನೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಗ್ರಂಥಾಲಯ ಅನುಕೂಲವಾಗಿದ್ದು, ಇಲ್ಲಿ ಸಿಗುವ ಸಂಪನ್ಮೂಲವನ್ನು ಬಳಸಿಕೊಳ್ಳುವ ಮೂಲಕ ಮಕ್ಕಳು ಓದಿನಲ್ಲಿ ಮುಂದೆಬರಬೇಕು. ಇತ್ತೀಚಿನ ದಿನಗಳಲ್ಲಿ ವೆಬ್‌ಸೈಟ್‌ನಲ್ಲಿ ಪ್ರಪಂಚದ ಎಲ್ಲ ಮಾಹಿತಿಗಳನ್ನು ಬೆರಳ ತುದಿಯಲ್ಲಿಯೇ ಪಡೆಯಬಹುದಾಗಿದೆ. ಆದ್ದರಿಂದ ಗ್ರಂಥಾಲಯಗಳಿಗೆ ಇಂದು ಮಹತ್ವ ಕಡಿಮೆಯಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಯೋಗೇಶ್, ಮಾಜಿ ಅಧ್ಯಕ್ಷ ನಾಗೇಂದ್ರ, ಆಶಾನಾಗೇಂದ್ರ, ಸದಸ್ಯರಾದ ಪುಟ್ಟರಾಜು, ಮಂಜುನಾಥ್, ಹೇಮಾವತಿ, ದಿವ್ಯಶ್ರೀ, ಲೋಕೇಶ್, ಜೆಡಿಎಸ್ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಅಜಯ್‌ರಾಮೇಗೌಡ, ಗ್ರಾಮದ ಮುಖಂಡರಾದ ಶಂಭು, ಪಾಪೇಗೌಡ, ಶಂಕರೇಗೌಡ, ಉಮೇಶ್ ಶಾಸಕರ ಆಪ್ತ ಸಹಾಯಕ ಪ್ರತಾಪ್ ಇದ್ದರು.