

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಹಗರಣ ಹಿನ್ನೆಲೆಯಲ್ಲಿ ಮುಡಾವನ್ನು ಸ್ವಚ್ಛಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ನೀಡುವ ಸಾಧ್ಯತೆ ವಿಚಾರದ ಕುರಿತು ನನಗೆ ಮಾಹಿತಿ ಇಲ್ಲ. ಅದರೆ, ಮುಡಾದಲ್ಲಿ ನಡೆದಿರುವ ಅವ್ಯವಸ್ಥೆ, ಅವ್ಯವಹಾರವನ್ನು ಸ್ವಚ್ಚ ಮಾಡುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಮಾಡಿದೆ. ಅದಕ್ಕಾಗಿ ಈಗಾಗಲೇ ಪಿ.ಎನ್. ದೇಸಾಯಿ ಆಯೋಗ ರಚನೆ ಮಾಡಿದೆ. ಮುಂದಿನ ದಿನಗಳಲ್ಲಿ ಮುಡಾದಲ್ಲಿ ಅವ್ಯವಹಾರ ಆಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಆಗಬೇಕು ಎಂಬುದುನ್ನು ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದು ಕೊಳ್ಳುತ್ತದೆ. ಉಪಚುನಾವಣೆ ಪ್ರಚಾರಕ್ಕೆ ನಾನು ಹೋಗುತ್ತೇನೆ. ಇಂತಹವರೇ ಅಭ್ಯರ್ಥಿ ಆಗಬೇಕು ಎಂದು ನಾನು ಹೇಳಲು ಬಯಸುವುದಿಲ್ಲ. ಹೈಕಮಾಂಡ್ ಸೂಚಿಸುವ ಯಾವುದೇ ವ್ಯಕ್ತಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.