

ಹುಬ್ಬಳ್ಳಿ : ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಉತ್ಸವದ ಮೆರವಣಿಗೆ ಮೇಲೆ ಸಮಾಜಘಾತುಕ ಶಕ್ತಿಗಳು ಕಲ್ಲು ತೂರಿ ಶಾಂತಿ ಭಂಗ ಮಾಡಿದ್ದನ್ನು ಗಮನಿಸಿದೆ ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಆರೋಪಿಸಿರುವ ಶಾಸಕ ಮಹೇಶ ಟೆಂಗಿನಕಾಯಿ, ಮುಖ್ಯಮಂತ್ರಿ ಅವರ ಕೈಯಲ್ಲಿರುವ ಗುಪ್ತಚರ ಇಲಾಖೆ ನಿದ್ದೆ ಮಾಡುತ್ತಿತ್ತಾ ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ರೀತಿ ನೀತಿಗಳಿಂದ ಈ ಕೃತ್ಯ ನಡೆದಿದೆ ಎಂದು ದೂರಿದ್ದಾರೆ ಶಾಸಕ ಟೆಂಗಿನಕಾಯಿ.
ಮದ್ದೂರಿನ ಶಾಸಕರು ವಿದೇಶಕ್ಕೆ ಹೋಗಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಚೆಲುವನಾರಾಯಣ ಸ್ವಾಮಿ ಅವರು ದುರ್ಘಟನೆ ನಡೆದ ಮರುದಿನ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಷ್ಟೊಂದು ಬೇಜವಾಬ್ದಾರಿ ಸಚಿವರು ಸಂಪುಟದಲ್ಲಿ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿಯ ಹಳೆ ಹುಬ್ಬಳ್ಳಿಯಲ್ಲಿ ಇಂತಹ ಘಟನೆಗಳು ನಡೆದಿದ್ದು ಮತ್ತು ಸ್ವತಃ ಕಾಂಗ್ರೆಸ್ನ ದಲಿತ ಶಾಸಕ ಶ್ರೀನಿವಾಸ ಅವರ ಮನೆಗೆ ನುಗ್ಗಿ ವಿಕೃತಿ ಮೆರೆದಿದ್ದರು. ತಾಲಿಬಾನ್ ಸಂಸ್ಕೃತಿಯ ಆರೋಪಿಗಳ ಮೇಲಿದ್ದ ಪ್ರಕರಣಗಳನ್ನು ಇದೇ ಕಾಂಗ್ರೆಸ್ ಸರ್ಕಾರ ಖುಲಾಸೆಗೊಳಿಸಿತ್ತು. ಇಂತಹ ಮನಸ್ಥಿತಿ ಇರುವ ಈ ಸರ್ಕಾರವು ಕೋಮುಗಲಭೆಗೆ ಬೆಂಬಲ ನೀಡುತ್ತಿದೆ ಎಂದು ಅರ್ಥವಾಗುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ವಾಗ್ದಾಳಿ ನಡೆಸಿದ್ದಾರೆ.
ನಾವುಗಳು ಭಾರತದಲ್ಲಿ ಇದ್ದೇವೆಯೇ ಅಥವಾ ಪಾಕಿಸ್ತಾನದ ತರಹ ಈ ಸರ್ಕಾರ ಕಾಯ್ದೆ- ಕಾನೂನುಗಳನ್ನು ರೂಪಿಸುತ್ತಿದೆ ಎಂದೆನಿಸುತ್ತಿದೆ. ಇತ್ತೀಚೆಗೆ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದುಗಳು ಯಾವುದೇ ರೀತಿಯ ಅಡಚಣೆ ಮಾಡಿಲ್ಲ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ಅತಿಯಾದ ತುಷ್ಟೀಕರಣ ಹಾಗೂ ರಾಜಕೀಯ ಓಲೈಕೆಯಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಹಿಂದುಗಳು ಹೋರಾಟಕ್ಕೆ ಇಳಿದರೆ ಸರ್ಕಾರವೇ ಬಿದ್ದು ಹೋಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.