

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದಲೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಮುಂದಾಗಿದ್ದು ಜಿಲ್ಲೆಯಲ್ಲಿ 10 ಶಾಲೆಗಳ ಕಾರ್ಯ ನಿರ್ವಹಣೆಗೆ ಅನುಮತಿ ಸಿಕ್ಕಿದೆ.
ದುಬಾರಿ ಶುಲ್ಕದ ಹಾವಳಿಯನ್ನು ತಪ್ಪಿಸಿ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದೊಂದಿಗೆ ವಿಧಾನಸಭಾ ಚುನಾವಣಾ ಪೂರ್ವ ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಗಳಲ್ಲಿ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳ ಕಾರ್ಯ ನಿರ್ವಹಣೆಯೂ ಸೇರಿದೆ. ಇದರೊಂದಿಗೆ ರಾಜ್ಯದಲ್ಲಿ ಮೊದಲ ಹಂತದಲ್ಲಿ ಬರೋಬ್ಬರಿ 262 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರ್ಕಾರವು ಆದೇಶ ಹೊರಡಿಸಿದೆ. ಅದರಂತೆ ಜಿಲ್ಲೆಯಲ್ಲಿ 10 ಪೂರ್ವ ಪ್ರಾಥಮಿಕ ಶಾಲೆಗಳನ್ನು ಎಲ್‌ಕೆಜಿ ವಿಭಾಗ ತೆರೆಯಲು ಅನುಮತಿ ಕೊಟ್ಟಿದೆ. 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಸಾಲಿನಲ್ಲಿಯೇ ಶಾಲಾ ತರಗತಿಗಳನ್ನು ಪ್ರಾಯೋಗಿಕವಾಗಿ ನಡೆಸಲು ಸೂಚಿಸಿರುವ ಸರ್ಕಾರ, ಸಂಬಂಧಪಟ್ಟ ಶಿಕ್ಷಣ ಇಲಾಖೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ತಿಳಿಸಿದೆ. ಪ್ರಸ್ತುತ ಯೋಜನೆಯಂತೆ ಆಗಸ್ಟ್ ಅಂತ್ಯದಿಂದ ಶಾಲೆಗಳು ಆರಂಭವಾಗುವ ಸಾಧ್ಯತೆ ಇದೆ.
* ಪ್ರಾರಂಭಕ್ಕೆ ಸಿದ್ಧತೆ
ಈಗಾಗಲೇ ಹೆಚ್ಚುವರಿ ಕೊಠಡಿಗಳನ್ನು ಹೊಂದಿರುವ ಸುಸಜ್ಜಿತ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಇದರ ನಡುವೆ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಬೋಧನೆಗಾಗಿ ಅತಿಥಿ ಶಿಕ್ಷಕರನ್ನು ಮತ್ತು ಮಕ್ಕಳ ನಿರ್ವಹಣೆಗಾಗಿ ಪ್ರತಿ ಶಾಲೆಗೆ ಒಬ್ಬರಂತೆ ಆಯಾರನ್ನು ನೇಮಿಸಿಕೊಳ್ಳಲಾಗುತ್ತಿದೆ. ಪ್ರೀ ನರ್ಸರಿ ಶಾಲೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ರ ವರೆಗೂ ಕಾರ್ಯನಿರ್ವಹಿಸಲಿವೆ. ಶೀಘ್ರದಲ್ಲಿಯೇ ಶಾಲೆಗಳಿಗೆ ಶಿಕ್ಷಣ ಇಲಾಖೆಯು ನಿಗದಿಪಡಿಸಿದ ಪಠ್ಯಪುಸ್ತಕ, ಬೋಧನಾ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ. ಉಳಿದಂತೆ ಶಿಕ್ಷಕರಿಗೆ ಮಾಸಿಕ 7,500 ರೂ ಮತ್ತು ಆಯಾಗೆ 5 ಸಾವಿರ ಗೌರವ ಧನ ನಿಗದಿಪಡಿಸಲಾಗಿದೆ. ಒಂದು ಶಾಲೆಗೆ ಗರಿಷ್ಠ 30 ಮಕ್ಕಳು ದಾಖಲಾತಿಗೆ ಅವಕಾಶ ನೀಡಿದೆ.
*ದುಬಾರಿ ಶುಲ್ಕಕ್ಕೆ ಪರದಾಟ
ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ಖಾಸಗೀ ಶಾಲೆಗಳು ತಲೆ ಎತ್ತಿವೆ. ಕೆಲವೆಡೆ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ದುಬಾರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಒಂದು ಮಗುವಿಗೆ ಕನಿಷ್ಠ 25 ಸಾವಿರ ರೂಗಳಿಂದ 40 ಸಾವಿರ ರೂಗಳನ್ನು ಪಡೆಯುತ್ತಿದ್ದು ಇದರ ಜತೆಗೆ ಶಾಲಾ ವಾಹನ ಶುಲ್ಕ, ಸಮವಸö, ಪಠ್ಯಪುಸ್ತಕ ಮತ್ತು ಇತರೆ ಕೌಶಲ ನಿರ್ವಹಣೆ ಚಟುವಟಿಕೆ ಹೆಸರಿನಲ್ಲಿ ಬೇರೆ ಶುಲ್ಕ ವಿಽಸಲಾಗುತ್ತಿದೆ. ಇದನ್ನು ಪಾವತಿಸಲಾಗದೇ ಬಡ ಮತ್ತು ಮಧ್ಯಮ ವರ್ಗದ ಜನರು ಮಕ್ಕಳನ್ನು ಅಂಗನವಾಡಿ ಶಾಲೆಗೆ ಕಳುಹಿಸುತ್ತಿದ್ದಾರೆ. ಇದರ ನಡುವೆ ಸರ್ಕಾರಿ ಶಾಲೆಗಳ ಪ್ರಾರಂಭವು ಖುಷಿಗೆ ಕಾರಣವಾಗಿದೆ.
* ಪ್ರಸಕ್ತ ಸಾಲಿನಲ್ಲಿ ವಿಳಂಬವಾಗಿಯಾದರೂ ಪ್ರಿ ನರ್ಸರಿ ಶಾಲೆಗಳನ್ನು ಸರ್ಕಾರದಿಂದ ಪ್ರಾರಂಭಿಸುತ್ತಿರುವಿಕೆಯು ಒಳ್ಳೆಯದು. ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಪಾಲಕರಿಗೆ ತುಂಬಾ ಅನುಕೂಲವಾಗುತ್ತದೆ.
ರಾಗಿಣಿ, ಗೃಹಿಣಿ