

ಯಲಬುರ್ಗಾ: ಸರ್ಕಾರಿ ಕಾಮಗಾರಿಗೆ ಬಳಸಿದ್ದ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದವನ್ನು ಗುರುವಾರ ಪೊಲೀಸರು ಬಂಧಿಸಿದ್ದು, ನಗದು ಸೇರಿ ಒಟ್ಟು 6.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ತಾಲೂಕಿನ ವಜ್ರಬಂಡಿಯ ದೇವಪ್ಪ ಭಜಂತ್ರಿ, ಕೊಪ್ಪಳದ ಕವಲೂರು ಓಣಿಯ ಯಮನೂರಪ್ಪ ಭಜಂತ್ರಿ, ಶಿವರಾಜ ಭಜಂತ್ರಿ, ತಾಯಪ್ಪ ಭಜಂತ್ರಿ, ಬಸವರಾಜ ಕೊರವರ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ 3.50 ಲಕ್ಷ ರೂ. ನಗದು, 3 ಲಕ್ಷ ರೂ. ಬೆಲೆ ಬಾಳುವ ವಾಹನ, ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಸಮೀಪದ ಕುದರಿಮೋತಿ ಸೀಮಾದ ಮಹ್ಮದ್‌ಸಾಬ್ ಜಮೀನಲ್ಲಿ ನಡೆಯುತ್ತಿದ್ದ ಕೊಪ್ಪಳ ಏತ ನೀರಾವರಿ ಯೋಜನೆಯ 3ನೇ ಹಂತದ ಪ್ಯಾಕೇಜ್ ಕಾಮಗಾರಿಗಾಗಿ ಸಂಗ್ರಹಿಸಿದ್ದ ಕಂಟ್ರೋಲ್‌ವಾಲ್ ಪೈಪ್‌ಗಳು ಹಾಗೂ ಇತರ ವಸ್ತುಗಳು ಕಳ್ಳತನವಾಗಿದ್ದವು.
2015-16ರಲ್ಲಿ ಮಂಗಳೂರು ಗ್ರಾಮದ ಹತ್ತಿರ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ ಬ್ಯಾರೇಜ್ ಕಂ. ಬ್ರಿಡ್ಜ್‌ಗೆ ಅಳವಡಿಸಿದ್ದ 5 ಟನ್ 76 ಕೆಜಿ ತೂಕದ 60 ಕಬ್ಬಿಣದ ಎಲಿಮೆಂಟ್ಸ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಕರಣ ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಜಿಲ್ಲಾ ಅಧೀಕ್ಷಕರು ಸೂಕ್ತ ಬಹುಮಾನ ಘೋಷಿಸಿದ್ದಾರೆ. ಡಿವೈಎಸ್ಪಿ ಶರಣಪ್ಪ ಸುಬೇದಾರ, ಸಿಪಿಐ ಮೌನೇಶ್ವರ ಪಾಟೀಲ್, ಪಿಎಸ್‌ಐ ಪ್ರಶಾಂತ ಹಾಗೂ ಸಿಬ್ಬಂದಿ ಇದ್ದರು.