

ಚಿಕ್ಕಬಳ್ಳಾಪುರ: ಸಾರ್ವಜನಿಕ ಹಿತಾಸಕ್ತಿ ದಾಖಲು, ಖಡಕ್ ಎಚ್ಚರಿಕೆಗೆಯಾದರೂ ತ್ವರಿತವಾಗಿ ಚಿಕ್ಕಬಳ್ಳಾಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವು ಉದ್ಘಾಟನಾ ಭಾಗ್ಯ ಕಂಡಿರುವುದಕ್ಕೆ ಹೈಕೋರ್ಟಿನ ನ್ಯಾಯಮೂರ್ತಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಕುಂಟುತ್ತ ಸಾಗುತ್ತಿದ್ದ ಕಾಲೇಜಿನ ಕಾಮಗಾರಿ, ಕಾಲೇಜಿನಲ್ಲಿ ತರಗತಿ ಕಾರ್ಯಾರಂಭಕ್ಕೆ ಅಸಡ್ಡೆಯ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಇದಕ್ಕೆ ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಧ್ಯೆ ಪ್ರವೇಶಿಸಿದ್ದು ಕೊನೆಗೆ ನ್ಯಾಯಾಧೀಶರ ಕಟ್ಟುನಿಟ್ಟಿನ ಸೂಚನೆಗೆ ಇತ್ತೀಚೆಗೆ ಕಾಲೇಜ್ ಉದ್ಘಾಟನೆ ಕಂಡಿದೆ. ಇದರ ನಡುವೆ ಇಲ್ಲಿ ಕೈಗೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೈಕೋರ್ಟಿನ ನ್ಯಾಯಮೂರ್ತಿಗಳು ಸಂತಸ ಹಂಚಿಕೊಂಡಿದ್ದಾರೆ. ಕಾಲೇಜಿನ ನಿರ್ಮಾಣದ ವಿಚಾರದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಪ್ರಮುಖ ಪಾತ್ರವಹಿಸಿರುವುದು ಸಂತೋಷ ತಂದಿದೆ. ವಿದ್ಯಾರ್ಥಿನಿಯರು ಮತ್ತು ವಕೀಲರು ಕಾನೂನು ಚೌಕಟ್ಟಿನಲ್ಲಿ ಹೋರಾಡಿ, ಈ ಕಟ್ಟಡ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದ್ರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಕೆ.ಸೋಮಶೇಖರ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಜಯಶಂಕರ್, ಜಿಲ್ಲಾ ಸದಸ್ಯ ಕಾರ್ಯದರ್ಶಿ ಅರುಣಾ ಕುಮಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ಪ್ರಾಂಶುಪಾಲ ಚಂದ್ರಯ್ಯ ಮತ್ತಿತರರು ಇದ್ದರು.
ಕಾಲೇಜಿನ ಸ್ಥಿತಿ ಸ್ಮರಿಸಿದ ವೀರಪ್ಪ
2023 ರ ಜನವರಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕಾಲೇಜಿನಿಂದ 53 ಅಂಚೆ ಕಾರ್ಡ್ ಬಂದಿದ್ದವು. ಇದರಲ್ಲಿ ಅವ್ಯವಸ್ಥೆಗಳ ಬಗ್ಗೆ ತಿಳಿಸಲಾಗಿತ್ತು. ಅದರಂತೆ ನಾನು ಕಾಲೇಜಿಗೆ ಭೇಟಿ ನೀಡಿದಾಗ ಕಟ್ಟಡಗಳಿಗೆ ಕಿಟಕಿ, ಬಾಗಿಲುಗಳು ಇರಲಿಲ್ಲ. ಅದು ಬೇರೆ ಎಲ್ಲ ವಿದ್ಯಾರ್ಥಿನಿಯರಿಗೆ ಒಂದೇ ಶೌಚಗೃಹ. ಕುಡಿಯಲು ನೀರು ಇರಲಿಲ್ಲ. ಇದನ್ನು ವೀಕ್ಷಿಸಿ, ಅಸಮಾಧಾನ ವ್ಯಕ್ತಪಡಿಸಿದರ ಜತೆಗೆ ಕಾನೂನು ಸೇವಾ ಪ್ರಾಧಿಕಾರದವರ ಜತೆ ಕಾಲೇಜಿನ ಆವರಣದ ಸ್ವಚ್ಛತಾ ಸೇವೆ ಕೈಗೊಳ್ಳಲಾಯಿತು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.