

ಪುತ್ತೂರು: ಅತಿ ಹೆಚ್ಚು ವಿದ್ಯಾರ್ಥಿನಿಯರ ಜಿಲ್ಲೆಯ ಎರಡನೇ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆ ಪಡೆದ ಪುತ್ತೂರಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಹಳೇ ಜೈಲಿನಲ್ಲೇ ಉಳಿದುಕೊಳ್ಳುವ ಲಕ್ಷಣ ಕಾಣುತ್ತಿದ್ದು, ಆನೆಮಜಲಿನಲ್ಲಿ ಕಾಲೇಜು ನಿರ್ಮಾಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.
800ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಪುತ್ತೂರು ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿಗೆ ನಗರದಿಂದ ಬೊಳುವಾರು-ಉಪ್ಪಿನಂಗಡಿ ರಸ್ತೆಯ ಬನ್ನೂರು ಆನೆಮಜಲಿನಲ್ಲಿ 4.70 ಎಕರೆ ಜಮೀನು ಮಂಜೂರುಗೊಂಡು ಇಲಾಖೆಯ ಆಯುಕ್ತರ ಹೆಸರಿಗೆ ಪಹಣಿ ಬದಲಾವಣೆಯಾಗಿತ್ತು. ಕಾಲೇಜು ಕಟ್ಟಡ ನಿರ್ಮಾಣಕ್ಕೆ 8 ಕೋಟಿ ರೂ. ಪ್ರಸ್ತಾವನೆ ಕೂಡ ಸಲ್ಲಿಸಲಾಗಿದ್ದು, 4.30 ಕೋಟಿ ರೂ.ಅನುದಾನ ಮಂಜೂರಾಗಿದೆ. ಇಲಾಖೆ ಹೆಸರಿಗೆ ಜಾಗದ ಪಹಣಿ ಆಗಿದ್ದರೂ ಆ ಜಾಗದ ಕುಮ್ಕಿ ಹಕ್ಕುದಾರರೊಬ್ಬರು ತಕರಾರು ಅರ್ಜಿ ಸಲ್ಲಿಸಿದ್ದರಿಂದ ಕೋರ್ಟ್ ತಡೆಯಾಜ್ಞೆ ನೀಡಿದೆ.
ಕುಮ್ಕಿ ವಿರಹಿತಗೊಳಿಸಿ ಜಿಲ್ಲಾಧಿಕಾರಿ ಜಾಗ ನೀಡಿದ ವಿಧಾನ ಸರಿಯಾಗಿಲ್ಲ ಎಂಬ ದೂರು ಅರ್ಜಿದಾರರದು. ಕಟ್ಟಡ ಕಟ್ಟಲು ತಡೆಯಾಜ್ಞೆ ಇರುವುದರಿಂದ ಇಷ್ಟರವರೆಗೆ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ಭಾಗ್ಯ ಮರೀಚಿಕೆಯಾಗಿದೆ. ಈ ಕಾರಣದಿಂದ ದೂರದೂರುಗಳಿಂದ ಕಾಲೇಜಿಗೆ ಸೇರಿರುವ ಬಡ ವಿದ್ಯಾರ್ಥಿನಿಯರಿಗೆ ಜೈಲ್ ಕಟ್ಟಡದಲ್ಲೇ ಪಾಠ ಕೇಳಬೇಕಾದ ಸ್ಥಿತಿ ಇದೆ. ಸ್ವಲ್ಪ ಸಮಯಕ್ಕೆ ಹಿಂದಿನ ಪುರಸಭಾ ಕಟ್ಟಡಕ್ಕೆ ತರಗತಿಗಳನ್ನು ಸ್ಥಳಾಂತರ ಮಾಡಿದ್ದರೂ ಅನಿವಾರ್ಯತೆಗೆ ಸಿಲುಕಿ ಮತ್ತೆ ಜೈಲಿನ ಕಟ್ಟಡಕ್ಕೆ ಕಾಲೇಜು ಸ್ಥಳಾಂತರವಾಗಿದೆ.
ವಿದ್ಯಾರ್ಥಿನಿಯರ ಸಂಖ್ಯೆ ಏರಿಕೆ
2014ರ ಜುಲೈನಲ್ಲಿ ಆರಂಭಗೊಂಡ ಕಾಲೇಜು ಪುತ್ತೂರು ನಗರದ ವಿವಿಧ ಖಾಲಿ ಕಟ್ಟಡಗಳಿಗೆ ಸುತ್ತಿ ಕೆಲವು ವರ್ಷಗಳಿಂದ ಪಾಳು ಬಿದ್ದ ಪುತ್ತೂರಿನ ಹಳೆಯ ಜೈಲು ಹಾಗೂ ತಾಲೂಕು ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. 2014-15ನೇ ಸಾಲಿನಲ್ಲಿ ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆಯಲ್ಲಿ ಕಾಲೇಜು ಆರಂಭಗೊಂಡಾಗ ಹಾಗೂ 2015-16 ನೇ ಸಾಲಿನಲ್ಲಿ ಜೈಲಿನ ಕಟ್ಟಡಕ್ಕೆ ಸ್ಥಳಾಂತಗೊಂಡಾಗ ಮೊದಲ ಶೈಕ್ಷಣಿಕ ವರ್ಷದಿಂದಲೂ ವಿದ್ಯಾರ್ಥಿನಿಯರ ಸಂಖ್ಯೆ ಏರಿಕೆಯಾಗಿದೆ.
ಪುತ್ತೂರಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿಗೆ ಆನೆಮಜಲಿನಲ್ಲಿ 4.70 ಎಕರೆ ಜಮೀನು ಮಂಜೂರುಗೊಂಡಿದ್ದರೂ ಖಾಸಗಿ ವ್ಯಕ್ತಿಯೋರ್ವ ಜಿಲ್ಲಾಧಿಕಾರಿಯವರ ನಿವೇಶನ ಮಂಜೂರಾತಿ ಕಾರ್ಯ ಸರಿಯಾಗಿಲ್ಲ ಎಂದು ಕೋರ್ಟ್ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಲು ಮಾತುಕತೆ ನಡೆಯುತ್ತಿದೆ.
ಸಂಜೀವ ಮಠಂದೂರು, ಪುತ್ತೂರು ಶಾಸಕ