

ಚಿಕ್ಕಬಳ್ಳಾಪುರ: ಕಳೆದ 8 ವರ್ಷಗಳಿಂದಲೂ ಚಿಕ್ಕಬಳ್ಳಾಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ತ್ವರಿತವಾಗಿ ಉದ್ಘಾಟನೆ ಕಾಣುವ ಆಶಯವೂ ಇನ್ನೂ ಈಡೇರಿಲ್ಲ.
ಹೌದು! ಕಳೆದ 2015 ನೇ ಸಾಲಿನಲ್ಲಿ ಅಣಕನೂರು ಗ್ರಾಮಕ್ಕೆ ಹೊಂದಿರುವ ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ಮೇಲ್ಸುತುವೆ ಸಮೀಪದ 2 ಎಕರೆ ಜಾಗದಲ್ಲಿ 10 ಕೋಟಿ ರೂ ವೆಚ್ಚದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಚಾಲನೆ ನೀಡಿದ್ದು 2017 ರೊಳಗೆ ಕಾಮಗಾರಿ ಮುಗಿಯಬೇಕಾಗಿತ್ತು. ಪ್ರಸ್ತುತ ಮೂಲ ಸೌಕರ್ಯಗಳ ಕೊರತೆಯಿಂದ ಕೂಡಿರುವ ತಾತ್ಕಾಲಿಕ ಕಟ್ಟಡದಲ್ಲಿ ಕಾಲೇಜ್ ಕಾರ್ಯ ನಿರ್ವಹಿಸುತ್ತಿದೆ.
ಹಿಂದೆ ಕಾಲೇಜಿನ ಸಮಸ್ಯೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪತ್ರ ಬರೆಯುವ ಚಳವಳಿ ನಡೆಸಿದ್ದು ಅಂದಿನ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ಕಾಲೇಜಿಗೆ ಭೇಟಿ ನೀಡಿ, ಮೂಲ ಸೌಕರ್ಯವನ್ನು ಒದಗಿಸುವಲ್ಲಿ ಜಿಲ್ಲಾಡಳಿತದ ತೋರಿರುವ ನಿರ್ಲಕ್ಷ್ಯ ಧೋರಣೆಗೆ ಕಿಡಿಕಾರಿದ್ದರು. ಹಾಗೆಯೇ ಸಾರ್ವಜನಿಕ ಹಿತಾಸಕ್ತಿಯನ್ನು ದಾಖಲಿಸಿ, ತ್ವರಿತವಾಗಿ ಕಾಲೇಜಿನ ಕಾಮಗಾರಿ ಮುಗಿಸಲು ಸೂಚಿಸಿದ್ದು ಕಳೆದ ಜುಲೈಗೆ ಕಟ್ಟಡ ಹಸ್ತಾಂತರಗೊಂಡು, ಹೊಸ ಕಟ್ಟಡದಲ್ಲಿ ತರಗತಿಗಳು ನಡೆಯಬೇಕಾಗಿತ್ತು.
* ನ್ಯಾಯಾಧೀಶರ ಪರಿಶೀಲನೆ
ಇತ್ತೀಚೆಗೆ ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಕಾಮಗಾರಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರುಣಕುಮಾರಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪರಿಶೀಲಿಸಿದರು.
ಪ್ರಸ್ತುತ ಬಹುತೇಕ ಕಟ್ಟಡದ ಕಾಮಗಾರಿ, ಕಾಂಪೌಂಡ್ ಪೂರ್ಣಗೊಂಡಿದೆ. ಉಳಿದಂತೆ ಪ್ರವೇಶದ್ವಾರ ಮಾರ್ಗವಾಗಿ ಖಾಸಗೀ ಜಮೀನಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿದೆ. ಇದರ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಿಕೆ, ಜಿಲ್ಲಾಡಳಿತವು ಬಾಕಿ ಉಳಿದಿರುವ 2 ಕೋಟಿ ರೂಗಳನ್ನು ತ್ವರಿತವಾಗಿ ಮಂಜೂರು ಮಾಡಿ, ಉದ್ದೇಶಿತ ಹೆಚ್ಚುವರಿ ಹೊಸ ಕೊಠಡಿಗಳನ್ನು ನಿರ್ಮಿಸುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.