ನೈನಾಡಿ ಕಾಲೇಜು ಮುಚ್ಚಲು ಷರಾ: ಮಕ್ಕಳ ಕೊರತೆಯ ನೆಪ, ಇಲಾಖೆಯಿಂದ ವರದಿ

college
ಕಾರ್ಯ ಸ್ಥಗಿತಗೊಳಿಸಿರುವ ನೈನಾಡಿನ ಸರ್ಕಾರಿ ಪದವಿಪೂರ್ವ ಕಾಲೇಜು.
Published on

ಸಂದೀಪ್ ಸಾಲ್ಯಾನ್, ಬಂಟ್ವಾಳ

ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಾಪಿಸಿದ್ದ ನೈನಾಡಿನ ಸರ್ಕಾರಿ ಪದವಿಪೂರ್ವ ಕಾಲೇಜು ಕಳೆದ ಒಂದು ವರ್ಷದಿಂದ ಬಂದ್ ಆಗಿದೆ. ವಿದ್ಯಾರ್ಥಿಗಳ ಅಬ್ಬರ ಕೇಳಿ ಬರಬೇಕಾಗಿದ್ದ ಕಾಲೇಜಿಗೆ ಬೀಗ ಜಡಿದು ಭೂತ ಬಂಗಲೆಯಂತಾಗಿದೆ.

ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಯನಾಡು ಎಂಬಲ್ಲಿ ನಬಾರ್ಡ್ ಆರ್‌ಐಡಿಎಫ್-12ರ ಯೋಜನೆ ಅಡಿ 2009-10ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪಿಸಲಾಯಿತು. ಬಜಿರೆ, ಪೊಸಪಟ್ನ, ಕುಳಾಲ್, ಎಡ್ತೂರು, ನೇರಳಕಟ್ಟೆ, ಮೂರ್ಜೆ, ನಿನ್ಯಾರು, ದೆಂಚಿನಡ್ಕ ಸಹಿತ ಎರಡೂ ತಾಲೂಕುಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಕಾಲೇಜು ವರದಾನವಾಗಿತ್ತು.

ಪ್ರಾರಂಭದಲ್ಲಿ ಕೇವಲ ಎರಡು ಉಪನ್ಯಾಸಕರು ಕರ್ತವ್ಯ ಸಲ್ಲಿಸಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಳೀಯ ಉದ್ಯಮಿಗಳು ಅತಿಥಿ ಉಪನ್ಯಾಸಕರನ್ನು ನೇಮಿಸಿ ಅವರಿಗೆ ವೇತನ ಪಾವತಿಸುತ್ತಿದ್ದರು. ಪಕ್ಕದಲ್ಲೇ ಇರುವ ಪ್ರೌಢಶಾಲೆಯಿಂದ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಕಾಲೇಜು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿತ್ತು.

ಕಾಲೇಜಿನ ಕಟ್ಟಡದಲ್ಲಿ ನಾಲ್ಕು ತರಗತಿ ಕೊಠಡಿ, ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಕೊಠಡಿ ಸಹಿತ ಪ್ರತ್ಯೇಕ 6 ಕೊಠಡಿಗಳಿತ್ತು. ಕಾಲೇಜಿನಲ್ಲಿ ಕಲೆ ಹಾಗೂ ವಾಣಿಜ್ಯ ವಿಭಾಗಗಳಿದ್ದವು. ಆದರೆ ಈ ಕಾಲೇಜು ಪ್ರಸ್ತುತ ವಿದ್ಯಾರ್ಥಿಗಳಿಲ್ಲದೇ ಕಳೆಗುಂದಿದೆ.

ಬಂದ್‌ಗೆ ಶಿಕ್ಷಣ ಇಲಾಖೆ ಸೂಚನೆ

ಈ ಕಾಲೇಜು 13 ವರ್ಷ ಸರಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿತ್ತು. ಆದರೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ ಎಂಬ ಕಾರಣ ಮುಂದಿಟ್ಟು ಷರಾ ಬರೆದ ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜನ್ನು ಮುಚ್ಚಲು ಸೂಚಿಸಿತ್ತು. 2022-2023 ಶೈಕ್ಷಣಿಕ ವರ್ಷದಿಂದ ಕಾಲೇಜು ಕಾರ್ಯ ಸ್ಥಗಿತಗೊಳಿಸಲಾಯಿತು.

ಸರ್ಕಾರಿ ಕಾಲೇಜು ಉಳಿವಿಗೆ ಸತತ ಪ್ರಯತ್ನಿಸಿದ್ದೇವೆ. ಸರ್ಕಾರ ಕಾಲೇಜಿನ ಜತೆಗೆ ಸಂಬಂಧಪಟ್ಟ ವಿಷಯಕ್ಕೆ ಉಪನ್ಯಾಸಕರನ್ನು ನೇಮಿಸಬೇಕಿತ್ತು. ವಿದ್ಯಾರ್ಥಿಗಳು ಕೂಡ ಅದೇ ನಿರೀಕ್ಷೆಯಲ್ಲಿದ್ದರು. ಆದರೆ ಸರಿಯಾಗಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂತು. - ನೆವ್ಲಸ್ಟರ್, ನೈನಾಡು ನೈನಾಡು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆ ಎಂದು ಅಲ್ಲಿನ ಪ್ರಾಂಶುಪಾಲರೇ ವರದಿ ನೀಡಿದ್ದಾರೆ. ವರದಿಯನ್ನು ಇಲಾಖೆಯಿಂದಲೇ ಪರಿಶೀಲಿಸಿದ್ದೇವೆ. ಆ ಊರಿನ ಎರಡು ಉದ್ಯಮಿಗಳು ಉಪನ್ಯಾಸಕರನ್ನು ನೇಮಿಸಿ, ಅವರ ವೇತನವನ್ನೂ ಭರಿಸುವ ಮೂಲಕ ಕಾಲೇಜಿನ ಉಳಿವಿಗೆ ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಆದರೂ ಕಾಲೇಜನ್ನು ಉಳಿಸಲಾಗಲಿಲ್ಲ. - ಜಯಣ್ಣ, ಡಿಡಿಪಿಯು ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net