

ಮಡಿಕೇರಿ:
ವಯನಾಡಿನಲ್ಲಿ ಸಂಭವಿಸಿದ ದುರಂತ ಮತ್ತು ರಾಜ್ಯದ ಅಲ್ಲಲ್ಲಿ ಆಗಾಗ್ಗೆ ವರದಿಯಾಗುತ್ತಿರುವ ಭೂಕುಸಿತ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಶ್ಚಿಮ ಘಟ್ಟ ಸಂಕರಕ್ಷಣೆಗೆ ಮುಂದಾಗಿದೆ. ಸ್ವಾಭಾವಿಕ, ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಕಾಫಿ ತೋಟ, ಮನೆ, ಹೋಂಸ್ಟೇ, ರೆಸಾರ್ಟ್ ಮಾಡುತ್ತಿರುವುದರಿಂದ ಮತ್ತು ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್ ಮರಗಳ ಕಡಿತಲೆ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಇಂಥ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಪಶ್ಚಿಮಘಟ್ಟದಲ್ಲಿ ೨೦೧೫ ರಿಂದೀಚೆಗೆ ಆಗಿರುವ ಎಲ್ಲಾ ಅರಣ್ಯ ಒತ್ತುವರಿ ತೆರವುಗೊಳಿಸಲು ತತ್‌ಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ೧ ತಿಂಗಳೊಳಗೆ ಕೈಗೊಂಡ ಕ್ರಮದ ವಿವರದೊಂದಿಗೆ ಕಡತದಲ್ಲಿ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ ರಚಿಸಲಾಗಿದ್ದು, ಸೋಮವಾರದಿಂದಲೇ ಕಾರ್ಯಾಚರಣೆ ಶುರುಮಾಡಿದೆ. ಎಸಿಎಫ್, ಡಿಸಿಎಫ್, ಸಿಫ್, ಸಿಸಿಎಫ್, ಎಪಿಸಿಸಿಎಫ್‌ಗಳಿಗೂ ಅರಣ್ಯ ಒತ್ತುವರಿ ಪ್ರಕಣಗಳ ವಿಚಾರಣೆ ನಡೆಸಿ ೬೪ಎ ಅಡಿಯಲ್ಲಿ ಆದೇಶ ನೀಡಲು ಅವಕಾಶವಿದ್ದು ಬಾಕಿ ಇರುವ ಎಲ್ಲಾ ೬೪ ಎ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಸೂಚಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಿಸಿರುವ ರೆಸಾರ್ಟ್, ಹೋಮ್ ಸ್ಟೇಗಳನ್ನು ಮೊದಲು ತೆರವು ಮಾಡಿ ನಂತರ ತೋಟ, ಕಟ್ಟಡಗಳನ್ನು ತೆರವು ಮಾಡಲು ಸಚಿವರು ಸೂಚನೆ ನೀಡಿದ್ದಾರೆ. ಸರ್ಕಾರದ ಈ ನಡೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಕೊಡಗಿನಲ್ಲಿರುವ ೩,೪೧೦ ಪ್ರಕರಣಗಳಿಗೆ ಸಂಬಂಧಿಸಿದಂತೆ ಒತ್ತುವರಿ ತೆರವು ಪ್ರಕ್ರಿಯೆ ಶುರುವಾಗಿದೆ. ಈ ಬಗ್ಗೆ ವಿಜಯವಾಣಿ ಓದುಗರು ತಮ್ಮ ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಂದು ರೈತನ ಸ್ಥಿತಿ ಹೀನಾಯವಾಗಿದೆ. ಒಂದೆಡೆ ಅಕಾಲಿಕ ಮಳೆ, ಅತಿ ಮಳೆಯಿಂದ ಫಸಲು ನ?್ಟ. ಅದಕ್ಕೂ ಮೇಲಾಗಿ ಕಾಡಾನೆಗಳ ನಿರಂತರ ದಾಳಿ. ಕೆಲವು ಕಡೆಯಂತೂ ತೋಟದಲ್ಲಿಯೇ ಕಾಡಾನೆಗಳು ಠಿಕಾಣಿ ಹೂಡಿವೆ. ಇದರಿಂದ ಕೂಲಿ ಆಳುಗಳು ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಸ್ಯೆಗಳು ಇದ್ದರೂ ಈಗ ಅರಣ್ಯ ಒತ್ತುವರಿ ತೆರವು ಎಂದು ಮತ್ತೆ ರೈತರಿಗೆ ತೊಂದರೆ ಕೊಡಲು ಮುಂದಾಗಿರುವುದು ಸರಿಯಲ್ಲ. ಮೊದಲು ಕೊಡಗಿನ ನೈಜ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿ.
ಪುಚ್ಚಿಮಾಡ ರಾಯ್ ಮಾದಪ್ಪ, ಅಧ್ಯಕ್ಷ, ರೈತ ಸಂಘ, ಮಾಯಮುಡಿ ಗ್ರಾಮ
ಒತ್ತುವರಿ ತೆರವುಗೊಳಿಸುವ ಮೊದಲು ಒತ್ತುವರಿ ಜಮೀನಿನಲ್ಲಿ ಹೋಂ ಸ್ಟೇ, ರೆಸಾರ್ಟ್‌ಗಳನ್ನು ನಿರ್ಮಿಸಲು ಅನುಮತಿ ಕೊಟ್ಟಂಥ ಗ್ರಾಮ ಪಂಚಾಯಿತಿ ಪಿಡಿಒ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಭೂ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಂಥ ಜಿಲ್ಲಾಧಿಕಾರಿಗಳನ್ನು ಸಸ್ಪೆಂಡ್ ಮಾಡುವ ತಾಕತ್ತು ಅರಣ್ಯ ಸಚಿವರಿಗೆ ಇದೆಯೇ ? ಇದಕ್ಕೆ ಶಿಫಾರಸ್ಸು ಮಾಡಿರುವ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಮೇಲೆ ಮೇಲೆ ಕ್ರಮ ಕೈಗೊಂಡ ನಂತರ ಒತ್ತುವರಿ ತೆರವು ಮಾಡುವ ಮನಸ್ಸು ಮಾಡಲಿ.
ಬಿ. ಪಿ. ಅನಿಲ್, ಸಾಮಾಜಿಕ ಕಾರ್ಯಕರ್ತ, ಸೋಮವಾರಪೇಟೆ.
ಸರ್ಕಾರದ ಈ ಕಾರ್ಯ ಪ್ರಶಂಸನೀಯ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಒತ್ತುವರಿಯಾದ ಪಶ್ಚಿಮಘಟ್ಟ ಪ್ರದೇಶವನ್ನು ತೆರವುಗೊಳಿಸದಿದ್ದಲ್ಲಿ ವಯನಾಡನ್ನು ಮೀರಿಸುವ ಗುಡ್ಡ ಕುಸಿತ, ಅಪಾರ ಪ್ರಮಾಣದ ಆಸ್ತಿಪಾಸ್ತಿ ಪ್ರಾಣ ಹಾನಿ ನಾವು ಕೂಡ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಯಾರ ಒತ್ತಡಕ್ಕೂ ಒಳಗಾಗದೆ ಒತ್ತುವರಿ ಆಗಿರುವ ಸಂಪೂರ್ಣ ಪಶ್ಚಿಮ ಘಟ್ಟದ ಪ್ರದೇಶ ತೆರವುಗೊಳಿಸಿ ಪಶ್ಚಿಮ ಘಟ್ಟವನ್ನು ರಕ್ಷಿಸಬೇಕು.
ಬಿ. ಎಸ್. ವೇಣುಗೋಪಾಲ್, ವ್ಯಾಪಾರಿ, ರಾಮನಗರ, ವಿರಾಜಪೇಟೆ
ಕೊಡಗಿನಲ್ಲಿ ನಡೆದಿರುವ ಪಶ್ಚಿಮ ಘಟ್ಟ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಬೇಕು. ಸರ್ಕಾರ ಇದಕ್ಕೂ ಮೊದಲು ಈ ಕಾರ್ಯವನ್ನು ಮಾಡಬೇಕಿತ್ತು. ಕೇವಲ ಒತ್ತುವರಿಯನ್ನು ತೆರೆವುಗೊಳಿಸುವುದು ಮಾತ್ರವಲ್ಲ, ಸಹಾಯ ಮಾಡಿದ ಅಧಿಕಾರಿಗಳಿಗೂ, ಒತ್ತುವರಿ ಮಾಡಿದವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥವರು ತಮ್ಮ ದುರಾಸೆಯಿಂದ ಅರಣ್ಯ ಸಂಪತ್ತನ್ನು ನಾಶ ಮಾಡಿ ದೊಡ್ಡ ದೊಡ್ಡ ಅಪಾಯಗಳಿಗೆ ಕಾರಣೀಭೂತರಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಯಾವುದೇ ಮುಲಾಜು ತೋರದೆ ತೆರವುಗೊಳಿಸಬೇಕು. ಪಶ್ಚಿಮಘಟ್ಟ ಉಳಿಸಬೇಕು.
ಜ್ಯೋತಿ ಬಿ.ವಿ., ಕಲಾವಿದೆ, ವಿರಾಜಪೇಟೆ.
ಇತ್ತಿಚಿನ ದಿನಗಳಲ್ಲಿ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿದರೆ ಈ ಹಿಂದೆ ಇದ್ದ ಕಾಡು, ಮರ ಗಳನ್ನು ಕಡಿದು ಪ್ರಕೃತಿಯನ್ನು ನಾಶ ಮಾಡುತ್ತಿರುವುದೇ ಕಾರಣವಾಗಿದೆ. ಇದರ ಪರಿಣಾಮ ಮೊನ್ನೆ ನಡೆದ ಕೇರಳದ ವಯನಾಡು ದುರಂತ ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅದೇ ಥರ ನಮ್ಮ ಕೊಡಗಿನಲ್ಲಿ ಆಗಬಾರದು. ಅರಣ್ಯ ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಉ?ಾ ಜಯೇಶ್, ಗೃಹಿಣಿ, ಶನಿವಾರಸಂತೆ
೨೦೧೫ರ ನಂತರ ಅರಣ್ಯ ಒತ್ತುವರಿ ಮಾಡಿದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದಿರುವುದು ಉತ್ತಮ ಬೆಳವಣಿಗೆ. ಅನೇಕರು ಇಂದಿಗೂ ಯಾವುದೆ ಜಾಗವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಉಳ್ಳವರೇ ಒತ್ತುವರಿ ಮಾಡಿಕೊಂಡು ಅರಣ್ಯದ ಮೇಲೆ ನಿರಂತರವಾಗಿ ದಾಳಿ ಮಾಡಿ ಪ್ರತಿನಿತ್ಯ ಬೆಲೆಬಾಳುವ ಮರಗಳನ್ನು ಕಡಿದು ಪ್ರಕೃತಿಯನ್ನು ನಾಶ ಮಾಡುತ್ತಿದ್ದಾರೆ. ಇಂಥ ಘಟನೆಗಳಿಂದಲೇ ಭೂ ಕುಸಿತ ಸಂಭವಿಸುತ್ತಿರುವುದು.
ಕಿರಣ್, ಗ್ರಾಮ ಪಂಚಾಯತಿ ಸದಸ್ಯ, ಆಲೂರು ಸಿದ್ದಾಪುರ
ಜನಸಾಮಾನ್ಯರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿಗೆ ಬಳಸಿಕೊಂಡಿರುವುದರಿಂದ ಸ್ವಾಭಾವಿಕ ಪರಿಸರ ನಾಶ ಹಾಗೂ ಮಾನವ ಪ್ರಾಣಿ ಸಂಘ?ರ್ಕ್ಕೆ ಎಡೆಮಾಡಿ ಕೊಟ್ಟಿರುತ್ತದೆ. ಇತ್ತೀಚೆಗೆ ನಡೆಯುತ್ತಿರುವ ಪ್ರಾಕೃತಿಕ ವಿಕೋಪಕ್ಕೆ ಅರಣ್ಯ ಒತ್ತುವರಿ ಒಂದು ಮೂಲ ಕಾರಣ ಎಂದು ಹೇಳಬಹುದು. ಅರಣ್ಯ ಭೂಮಿ ಒತ್ತುವರಿ ತೆರವಿಗೆ ಸರ್ಕಾರ ಮುಂದಾಗಿರುವುದು ಒಳ್ಳೆಯದು. ಆದರೆ ಇದು ಬಡವ ಬಲ್ಲಿದವರಿಗೆ ಒಂದೇ ರಿತಿಯಲ್ಲಿ ಅನ್ವಯವಾದರೆ ಮಾತ್ರ ಅರ್ಥಪೂರ್ಣ ಮತ್ತು ಸಮಂಜಸವಾಗಿರುತ್ತದೆ.
ಕಡ್ಲೇರ ತುಳಸಿ ಮೋಹನ್, ಅಧ್ಯಕ್ಷೆ, ಕನ್ನಡ ಸಾಹಿತ್ಯ ಪರಿ?ತ್ತು, ಮಡಿಕೇರಿ ತಾಲೂಕು
ಪ್ರಾಕೃತಿಕ ವಿಕೋಪಗಳು ಮತ್ತು ಜೀವರಾಶಿಗಳಿಗೆ ಆಗುತ್ತಿರುವ ಹಾನಿಯನ್ನು ತಪ್ಪಿಸಲು ಒತ್ತುವರಿ ಭೂಮಿಯನ್ನು ತೆರವುಗೊಳಿಸುವಂತೆ ಸಚಿವ ಈಶ್ವರ ಖಂಡ್ರೆಯವರು ನೀಡಿದ ಆದೇಶ ಸ್ವಾಗತಾರ್ಹ. ಆದರೆ ಈ ಹಿನ್ನಲೆಯಲ್ಲಿ ಸಾಕಷ್ಟು ಸಣ್ಣ ರೈತರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆದ್ದರಿಂದ ಒತ್ತುವರಿ ಮಾಡುವ ಸಂದರ್ಭದಲ್ಲಿಯೇ ಅರಣ್ಯ ಇಲಾಖೆ ಅವಕಾಶ ನೀಡದಿದ್ದಲ್ಲಿ ಇವತ್ತು ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಪ್ರಕೃತಿ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ನಿಯಂತ್ರಿಸಲು ಮತ್ತು ಮನುಕುಲದ ಹಿತದೃಷ್ಟಿಯಿಂದ ತೆರವು ಕಾರ್ಯ ಅನಿವಾರ್ಯ.
ಲೀಲಾಕುಮಾರಿ ತೊಡಿಕಾನ, ಕವಯತ್ರಿ, ಕುಶಾಲನಗರ
ಅರಣ್ಯ ಭೂಮಿ ಒತ್ತತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಈಗಾಗಲೇ ಪ್ರಕ್ರಿಯೆಗಳು ಶುರುವಾಗಿದೆ. ೩ ಎಕರೆಗಿಂತ ಹೆಚ್ಚಿನ ಒತ್ತುವರಿಗಳನ್ನು ತೆರವು ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೩೪೧೦ ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳಿದ್ದು, ಸಂಬಂಧಿಸಿದ ಮಾಹಿತಿಯನ್ನು ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಅರಣ್ಯ ಭೂಮಿ ಒತ್ತುವರಿಗಳನ್ನು ತೆರವು ಮಾಡಲು ಎಸಿಎಫ್‌ಗಳ ನೇತೃತ್ವದಲ್ಲಿ ಕೆಲಸಗಳು ನಡೆಯುತ್ತಿದೆ.
ಬಿ. ಭಾಸ್ಕರ್, ಡಿಸಿಎಫ್, ಮಡಿಕೇರಿ ಅರಣ್ಯ ವಿಭಾಗ
ವಯನಾಡು ಮತ್ತು ಉತ್ತರ ಕನ್ನಡದ ಶಿರೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ದೊಡ್ಡ ಪ್ರಮಾಣದಲ್ಲಿ ಜೀವಹಾನಿ ಆಗಿದೆ. ಸಹಸ್ರಾರು ವರ್ಷಗಳ ಗುಡ್ಡವೇ ಕಣ್ಮರೆ ಆಗಿದೆ. ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಸೇರಿದಂತೆ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
ಈಶ್ವರ ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ