ಮಾರ್ಚ್​ನಿಂದ ‘ಪಾಲಿಕೆ ನಡೆ ಜನರ ಕಡೆ’

New Phone in New
Published on

ಹುಬ್ಬಳ್ಳಿ : ಮಹಾನಗರ ಪಾಲಿಕೆಯ ಆಡಳಿತವನ್ನು ಜನರ ಬಳಿ ಮತ್ತಷ್ಟು ಹತ್ತಿರ ಕೊಂಡೊಯ್ದು, ಅವರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವ ಜತೆಗೆ ಮೂಲಸೌಲಭ್ಯ ಒದಗಿಸುವ ಉದ್ದೇಶದಿಂದ ಮುಂದಿನ ತಿಂಗಳಿಂದ ‘ಪಾಲಿಕೆ ನಡೆ ಜನರ ಕಡೆ’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಾಪೌರ ರಾಮಪ್ಪ ಬಡಿಗೇರ ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆ ಮಹಾಪೌರರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ‘ಮೇಯರ್ ಮಾತುಕತೆ : ನಿಮ್ಮ ನಗರ-ನಿಮ್ಮಧ್ವನಿ’ ಫೋನ್ ಇನ್ ಕಾರ್ಯಕ್ರಮದ ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಪ್ರತಿ ತಿಂಗಳು ಪಾಲಿಕೆ ನಡೆ ಜನರ ಕಡೆ ಕಾರ್ಯಕ್ರಮ ಆಯೋಜಿಸಲಾಗುವುದು. ಆದರೆ, ಈ ಕಾರ್ಯಕ್ರಮವನ್ನು ವಲಯ ಮಟ್ಟದಲ್ಲಿ ನಡೆಸಬೇಕೋ ಅಥವಾ ವಾರ್ಡ್ ಮಟ್ಟದಲ್ಲಿಯೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆಯುಕ್ತರೊಂದಿಗೆ ರ್ಚಚಿಸಿ, ಈ ಕಾರ್ಯಕ್ರಮದ ರೂಪರೇಷೆ ಅಂತಿಮಗೊಳಿಸಲಾಗುವುದು ಎಂದರು.

ಚಿಟಗುಪ್ಪಿ ಆಸ್ಪತ್ರೆಯಲ್ಲಿ ಪ್ರಾರಂಭಿಸಿರುವ ಸ್ಮಾರ್ಟ್​ಹೆಲ್ತ್ ಯೋಜನೆಯಡಿ ಯಾವುದೇ ಕಾರ್ಯ ಆಗದಿದ್ದರೂ 3 ಕೋಟಿ ರೂ.ಗಳ ವೆಚ್ಚ ಮಾಡಲಾಗಿರುವ ಬಗ್ಗೆ ದೂರು ಇದೆ. ಈ ಬಗ್ಗೆ ತನಿಖೆಗೆ ಸದನ ಸಮಿತಿ ರಚಿಸಿದ್ದು, ಶೀಘ್ರ ವರದಿ ತರಿಸಿಕೊಳ್ಳಲಾಗುವುದು ಎಂದರು.

ಕಳೆದ ತಿಂಗಳಿನ ಫೋನ್ ಇನ್ ಕಾರ್ಯಕ್ರಮದಲ್ಲಿ 43 ದೂರುಗಳು ಬಂದಿದ್ದವು. ಇವುಗಳಲ್ಲಿ 31 ಸಮಸ್ಯೆಗಳನ್ನು ಈಗಾಗಲೇ ಪರಿಹರಿಸಲಾಗಿದೆ. ಇನ್ನುಳಿದವುಗಳಲ್ಲಿ ಇ-ಆಸ್ತಿ, ಖಾತಾ ಬದಲಾವಣೆ ಹಾಗೂ ಇನ್ನಿತರ ದೂರುಗಳಿದ್ದು, ಅವುಗಳನ್ನೂ ಬಗೆಹರಿಸಲಾಗುವುದು ಎಂದರು.

ಪೋನ್ ಇನ್ ಕಾರ್ಯಕ್ರಮಕ್ಕೆ ಬರುವ ದೂರುಗಳ ನಿವಾರಣೆಗೆ ಸಂತೋಷ ಯರಂಗಳಿಮಠ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಕಳೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ನಿವಾರಣೆಗೆ ನಿರ್ಲಕ್ಷ್ಯ ತೋರಿದ 6 ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದು, 24 ತಾಸಿನೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ಅವರ ಉತ್ತರ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ಈ ಬಾರಿ ಫೋನ್ ಇನ್ ಕಾರ್ಯಕ್ರಮದಲ್ಲಿ 33 ಜನ ಕರೆ ಮಾಡಿದ್ದು, 43 ದೂರು ನೀಡಿದ್ದಾರೆ. ರಸ್ತೆ ಹದಗೆಟ್ಟಿರುವುದು, ಒಳಚರಂಡಿ ಸಮಸ್ಯೆ, ಕುಡಿಯುವ ನೀರಿನ ತೊಂದರೆ ಮತ್ತಿತರ ತೊಂದರೆಗಳನ್ನು ಹೇಳಿಕೊಂಡಿದ್ದಾರೆ. ಅವುಗಳನ್ನು ಆದ್ಯತೆ ಮೇರೆಗೆ ಸರಿಪಡಿಸಲಾಗುವುದು ಎಂದರು.

ಧಾರವಾಡ ಪ್ರಜಾನಗರದ ಉದ್ಯಾನದಲ್ಲಿ ಅಸುರಕ್ಷತೆ ಬಗ್ಗೆ ನಾಗರಿಕರೊಬ್ಬರು ಕರೆ ಮಾಡಿದ್ದರು. ಆ ಉದ್ಯಾನಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗುವುದು. ಆರ್ಯಭಟ ಟೆಕ್​ಪಾರ್ಕ್​ನಲ್ಲಿ ಖಾಲಿ ನಿವೇಶನಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾವುದು ಎಂದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ನಿರಂತರ ನೀರು ಯೋಜನೆ ವಾರ್ಡ್ ಹೊರತುಪಡಿಸಿ ಇನ್ನುಳಿದ ಎಲ್ಲ ವಾರ್ಡ್​ಗಳಿಗೆ ಪ್ರತಿ ಎರಡು ದಿನಕ್ಕೊಮ್ಮೆ ಏಪ್ರಿಲ್​ನಿಂದ ನೀರು ಪೂರೈಸುವಂತೆ ಎಲ್ ಆಂಡ್ ಟಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಎಲ್ ಆಂಡ್ ಟಿನವರು ಜೂನ್​ವರೆಗೆ ಸಮಯ ಕೇಳಿದ್ದಾರೆ ಎಂದು ಮಹಾಪೌರ ರಾಮಪ್ಪ ಬಡಿಗೇರ ತಿಳಿಸಿದರು.

ರಾಜ್ಯ ಸರ್ಕಾರದಿಂದ ಹು-ಧಾ ಮಹಾನಗರ ಪಾಲಿಕೆಗೆ ಬರಬೇಕಿರುವ 300 ಕೋಟಿ ರೂ. ಪಾವತಿಸುವಂತೆ ಆಗ್ರಹಿಸಿ ನಗರಾಭಿವೃದ್ಧಿ ಸಚಿವರು ಹಾಗೂ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಪಾಲಿಕೆ ಸರ್ವ ಸದಸ್ಯರೊಂದಿಗೆ ನಿಯೋಗ ಹೋಗಲು ನಿರ್ಧರಿಸಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರೊಂದಿಗೆ ರ್ಚಚಿಸಲಾಗಿದೆ ಎಂದರು.

ಇದಕ್ಕೂ ಮೊದಲು ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್​ಗಳಿಂದ ಕರೆ ಮಾಡಿದ ಜನರು, ಕುಡಿಯುವ ನೀರು, ಹದಗೆಟ್ಟ ರಸ್ತೆ ಹಾಗೂ ಮತ್ತಿತರ ಸಮಸ್ಯೆಗಳನ್ನು ಹೇಳಿಕೊಂಡರು. ಪಾಲಿಕೆ ವಲಯ ಸಹಾಯಕ ಆಯುಕ್ತರು ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net