ರಾಜ್ಯದ ದೇವಾಲಯಗಳ ಆಸ್ತಿ ರಕ್ಷಣೆಗೆ ಸರ್ಕಾರ ಮಹತ್ವದ ಕ್ರಮ

Endoment
Published on

ಬೆಂಗಳೂರು: ವಕ್ಫ್ ಮಂಡಳಿ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಹೇಳಿ ನೋಟಿಸ್ ನೀಡಿದೆ ಎಂಬ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ಮಧ್ಯೆಯೇ ಕರ್ನಾಟಕ ರಾಜ್ಯ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ (ಮುಜರಾಯಿ) ಇಲಾಖೆ ದೇವಾಲಯಗಳ ಆಸ್ತಿ ರಕ್ಷಣೆಗೆ ಮಹತ್ವದ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ 10,700 ಎಕರೆ ದೇವರ ಆಸ್ತಿ ಉಳಿಸುವಲ್ಲಿ ಯಶಸ್ವಿಯಾಗಿದೆ.

ಇಲಾಖೆಗೆ ಸೇರಿದ್ದ ದೇವಾಲಯಗಳ ವ್ಯಾಪ್ತಿಯಲ್ಲಿನ ಸಾವಿರಾರು ಎಕರೆ ಜಮೀನು ಅಕ್ರಮ ಒತ್ತುವರಿಯಿಂದಾಗಿ ಅನ್ಯರ ಪಾಲಾಗಿತ್ತು. ಕೆಲ ಸಂಸ್ಥೆಗಳು, ಟ್ರಸ್ಟ್‌ಗಳು ಹಾಗೂ ಖಾಸಗಿ ವ್ಯಕ್ತಿಗಳು ದೇವರ ಅಸ್ತಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಅವರು ಕೈಗೊಂಡ ಕ್ರಮದಿಂದಾಗಿ ರಾಜ್ಯದ ವಿವಿಧ ದೇವಾಲಯಗಳ 10,700 ಎಕರೆ ಜಮೀನನ್ನು ರಕ್ಷಣೆ ಮಾಡಲಾಗಿದ್ದು, 5,022 ಆಸ್ತಿಗಳಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಸೃಷ್ಟಿಸಿ, ದೇವಸ್ಥಾನಗಳ ಅಧೀನಕ್ಕೆ ನೀಡಲಾಗಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 205 ಎ, 193 ಬಿ ಮತ್ತು 34,166 ಸಿ ಸೇರಿ ಒಟ್ಟು 34,564 ದೇವಾಲಯಗಳಿದ್ದು, ಈ ಪೈಕಿ ಬಹುತೇಕ ದೇವಾಲಯಗಳಿಗೆ ಸರ್ಕಾರ ಮತ್ತು ದಾನಿಗಳು ನೀಡಿದ ಆಸ್ತಿಯಿದೆ. ಆದರೆ ಬಹುತೇಕ ಕಡೆಗಳಲ್ಲಿ ದೇವರ ಆಸ್ತಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿತ್ತು. ರಾಮಲಿಂಗಾರೆಡ್ಡಿ ಅವರು ಇಲಾಖೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ 10,700 ಎಕರೆ ಆಸ್ತಿಯನ್ನು ಮರು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಸಚಿವ ರಾಮಲಿಂಗಾರೆಡ್ಡಿ, ನಮ್ಮ ಸರ್ಕಾರ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಅಭಿಯಾನದ ಮಾದರಿಯಲ್ಲಿ ದೇವರ ಅಸ್ತಿ ಸಂರಕ್ಷಣೆ ಮಾಡಲಾಗುತ್ತಿದೆ. ಆ ಮೂಲಕ ಅಧಿಕಾರಕ್ಕೆ ಬಂದ ನಂತರ ಒತ್ತುವರಿಯಾಗಿದ್ದ ದೇವಾಲಯದ ಆಸ್ತಿಯನ್ನು ಮರಳಿ ಪಡೆಯಲಾಗಿದೆ. ದಾಖಲೆಗಳು ಇಲ್ಲದೆ ಇದ್ದ ಜಮೀನುಗಳಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆ ಸೃಷ್ಟಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net