ಸಾಯಿ ಕರ್ಮಚಾರಿಗಳಿಗೆ ಸರ್ಕಾರ ಆಸರೆ, ವಿವಿಧ ಯೋಜನೆ ಮಾಹಿತಿ ನೀಡಿದ ಜಿಪಂ ಸಿಇಒ ರವಿಕುಮಾರ್

9 Dhl ph Sapayi karmachari News ph1a
Published on

ದೇವನಹಳ್ಳಿ: ಸಫಾಯಿ ಕರ್ಮಚಾರಿಗಳು ಹಾಗೂ ಅವರ ಕುಟುಂಬಗಳಿಗೆ ಪುನರ್ವಸತಿ ಹಾಗೂ ಸೌಲಭ್ಯ ನೀಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆ ರೂಪಿಸಿದ್ದು, ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜೀತವಿಮುಕ್ತರ ಹಾಗೂ ಸಫಾಯಿ ಕರ್ಮಚಾರಿಗಳ ಜಿಲ್ಲಾಮಟ್ಟದ ಪುನರ್ವಸತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜೀತಮುಕ್ತರಿಗೆ ಹಾಗೂ ಸಾಯಿ ಕರ್ಮಚಾರಿಗಳ ಕುಟುಂಬಕ್ಕೆ ನೆರವು ಒದಗಿಸಲು ಸರ್ಕಾರದ ಯೋಜನೆ ತಿಳಿಸುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.

ಗುರುತಿನ ಚೀಟಿ ಪಡೆದ ಲಾನುಭವಿಗಳ ಮಕ್ಕಳಿಗೆ ವಿದ್ಯಾಭ್ಯಾಸ, ವಿದ್ಯಾರ್ಥಿ ವೇತನ ಹಾಗೂ ಉನ್ನತಮಟ್ಟದ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳಲು ನೆರವು ಕೊಡಿಸುವುದು, ಸಾಯಿ ಕರ್ಮಚಾರಿ ವೃತ್ತಿಯಿಂದ ಮುಕ್ತಿ ಹೊಂದಿದವರಿಗೆ ಪರ್ಯಾಯ ಉದ್ಯೋಗ, ಸ್ವಯಂ ಉದ್ಯೋಗಕ್ಕೆ ಆರ್ಥಿಕ ಸಹಾಯ, ವಸತಿ ಹಾಗೂ ಮನೆ ನಿರ್ಮಿಸಿಕೊಡುವುದು, ಮುಂತಾದ ಸೇವೆಗಳು ಈ ಪುನರ್ವಸತಿ ಯೋಜನೆಯಲ್ಲಿ ಲಭಿಸಲಿವೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಮಲಹೊರುವ ಪದ್ಧತಿ ನಿಷೇಧಿಸಲಾಗಿದೆ. ಈ ಕಾಯ್ದೆ ಪ್ರಕಾರ ಈ ಕಾಯಕ ಮಾಡುತ್ತಿದ್ದ ವ್ಯಕ್ತಿ ಅಥವಾ ಅಂತಹ ಕುಟುಂಬ ಗುರುತಿಸಿ 40 ಸಾವಿರ ರೂ. ಪರಿಹಾರ ನೀಡಿ, ನಿವೇಶನ ರಹಿತರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಲಾಗುವುದು ಎಂದರು.

ಮಲ ಹೊರುವ ಕೆಲಸ ಮಾಡಿಸುವ ವ್ಯಕ್ತಿಗಳಿಗೆ ಮೊದಲ ಬಾರಿ 50 ಸಾವಿರ ರೂ. ದಂಡ, 1 ವರ್ಷ ಜೈಲುವಾಸ, 2ನೇ ಬಾರಿಗೆ 1 ಲಕ್ಷ ರೂ. ದಂಡ 2 ವರ್ಷ ಜೈಲು, 3ನೇ ಬಾರಿಗೆ 5 ಲಕ್ಷ ರೂ. ದಂಡ 5 ವರ್ಷ ಸಜೆ ಶಿಕ್ಷೆ ವಿದಿಸಲಾಗುವುದು. ಒಂದು ವೇಳೆ ಮ್ಯಾನ್‌ಹೋಲ್‌ಗೆ ಇಳಿದು ಮೃತಪಟ್ಟ ಪರಿಶಿಷ್ಟರಿಗೆ 18 ಲಕ್ಷ ರೂ. ಹಾಗೂ ಇತರೆ ವ್ಯಕ್ತಿಗಳಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.

ದೇವನಹಳ್ಳಿ ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ಪೌರಕಾರ್ಮಿಕರಿಗೆ ಹಾಗೂ ದಿನಗೂಲಿ ನೌಕರರಿಗೆ ಉಚಿತವಾಗಿ ಬೆಳಗಿನ ಉಪಾಹಾರ, ವೈದ್ಯಕೀಯ ಚಿಕಿತ್ಸೆ, ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುತ್ತದೆ. ವಸತಿ ರಹಿತರಿಗೆ ವಸತಿ ಸೌಕರ್ಯ ಒದಗಿಸಲಾಗುವುದು ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಧುಸೂದನ್, ಬ್ಯಾಂಕಿನಿಂದ ಸಿಗುವ ಸೌಲಭ್ಯ ವಿವರಿಸಿದರು.

ದೇವನಹಳ್ಳಿ ತಾಪಂ ಇಒ ವಸಂತಕುಮಾರ್, ದೊಡ್ಡಬಳ್ಳಾಪುರ ತಾಪಂ ಇಒ ಮುರುಡಯ್ಯ, ಹೊಸಕೋಟೆ ತಾಪಂ ಇಒ ಶ್ರೀನಾಥ್‌ಗೌಡ, ನೆಲಮಂಗಲ ತಾಪಮ ಇಒ ಲಕ್ಷ್ಮೀನಾರಾಯನಸ್ವಾಮಿ, ಸಮಾಜ ಕಲ್ಯಾಣಾಧಿಕಾರಿಗಳಾದ ಚನ್ನಬಸಪ್ಪ, ಎಸ್.ಕೃಷ್ಣಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net