ತಾಲೂಕು ಬರಪೀಡಿತ ಘೋಷಣೆಗೆ ಒತ್ತಾಯ

dj hlk chandrappa
Published on

ಹೊಳಲ್ಕೆರೆ: ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಬೆಳೆ ನಷ್ಟ ಪರಿಹಾರ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಟ್ಟು ರೈತರನ್ನು ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ಹಿಂದೆಂದೂ ಕಾಣದಂತ ಬರಗಾಲ ಬಂದಿದೆ.

ರೈತರು ಹೊಲ ಹದಗೊಳಿಸಿ ಬೆಳೆ ಬಿತ್ತಿ, ಗೊಬ್ಬರ ಹಾಕಿ, ಕಳೆ ತೆಗೆದು, ಎಡೆಕುಂಟೆ ಹೊಡೆಸಿ ಮಳೆಗಾಗಿ ಕಾಯುತ್ತಿದ್ದಾರೆ. ಮಳೆ ಬಾರದೆ ಫಸಲುಗಳು ಒಣಗುತ್ತಿವೆ ಎಂದರು. ವಿದ್ಯುತ್ ಪೂರೈಕೆಯಾಗದೆ ತೋಟಗಳು ಬತ್ತುತ್ತಿವೆ.

ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳನ್ನು ಜನ ಕೆಟ್ಟದಾಗಿ ಬೈದಾಡುತ್ತಿದ್ದಾರೆಂದು ಹೇಳಿದರು.

ದಿನಕ್ಕೆ ಕನಿಷ್ಟ 5 ಗಂಟೆಗಳಾದರೂ ರೈತರಿಗೆ ವಿದ್ಯುತ್ ಕೊಡಬೇಕು. ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೂ ಬರಗಾಲವಿತ್ತು.

ಈಗ ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ. ಈಗಲೂ ಬರಗಾಲ ಎದುರಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರ ಖಾಯಂ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ ಎಂದರು.

ರೈತ ಸಂಕಷ್ಟದಲ್ಲಿದ್ದು, ಬೆಳೆ ಪರಿಹಾರ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕಳೆದ ಐದು ವರ್ಷದ ಅವಧಿಯಲ್ಲಿ ನಮ್ಮ ಸರ್ಕಾರವಿದ್ದಾಗ ಬೇರೆ ಕಡೆಯಿಂದ ವಿದ್ಯುತ್ ತಂದು ರೈತರಿಗೆ ದಿನಕ್ಕೆ 7 ಗಂಟೆಗಳ ಕಾಲ ಪವರ್ ನೀಡಲಾಗಿದೆ.

ವ್ಯತಿರಿಕ್ತ ಪರಿಣಾಮಕ್ಕೆ ಅವಕಾಶ ನೀಡದೆ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಿದರು.

ವಿದ್ಯುತ್ ಕಡಿತ ಮಾಡಿ ಗೃಹಜ್ಯೋತಿ ನೀಡಿದ್ದಾರೆ. ರೈತರಿಗೆ ಏನು ದಿನಕ್ಕೆ 5 ರಿಂದ 7 ಗಂಟೆ ವಿದ್ಯುತ್ ಪೂರೈಸುತ್ತಾರೋ, ಅದರಲ್ಲಿ ಯಾವುದೇ ಸಂದರ್ಭದಲ್ಲಿ ಕಡಿತಗೊಳಿಸಬಾರದು.ಡಾ.ಎಂ. ಚಂದ್ರಪ್ಪ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net