

ಮಡಿಕೇರಿ: ಸಮಾಜದ ಒಳಿತಿಗಾಗಿ ಪತ್ರಿಕಾ ಕ್ಷೇತ್ರದಲ್ಲಿ ಜೋಡೆತ್ತಿನಂತೆ ಕಾರ್ಯನಿರ್ವಹಿಸುವ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಸಂಕಷ್ಟಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಒತ್ತಾಯಿಸಿದರು.
ಕೊಡಗು ಪತ್ರಕರ್ತರ ಸಂಘ, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಮತ್ತು ಪತ್ರಿಕಾ ವಿತರಕ ಸಮುದಾಯಕ್ಕೆ ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ದೊರಕಬೇಕಾದ ಅಗತ್ಯ ಸೌಲಭ್ಯಗಳು ದೊರಕಿಲ್ಲ. ರಾಜ್ಯ ವ್ಯಾಪಿ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ೧೦ ಸಾವಿರಕ್ಕೂ ಹೆಚ್ಚಿನ ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿದ್ದಾರೆ. ವಿಪರ್ಯಾಸವೆಂದರೆ ಸರ್ಕಾರದ ಮಾನ್ಯತೆ ಪಡೆದ ಪತ್ರಕರ್ತರ ಸಂಖ್ಯೆ ಕೇವಲ ೧೫೦೦ ಎಂದು ವಿಷಾದಿಸಿದರು.
ಕಳೆದ ೨೦೧೮ರಲ್ಲಿ ಸಿದ್ದರಾಮಯ್ಯ ಅವರು ಅಂದಿನ ಆಡಳಿತಾವಧಿಯ ಕೊನೆಯ ಬಜೆಟ್‌ನಲ್ಲಿ ೨ ಕೋಟಿ ರೂ.ಗಳ ಪತ್ರಿಕಾ ವಿತರಕರ ಕ್ಷೇಮನಿಧಿಯನ್ನು ಘೋಷಿಸಿದ್ದರು. ಆದರೆ, ನಂತರದ ಅವಧಿಯಲ್ಲಿ ಅದು ಅನುಷ್ಠಾನಕ್ಕೆ ಬರಲಿಲ್ಲ. ಇಂದಿನ ಸರ್ಕಾರ ವಿವಿಧ ಜನಪರ ಯೋಜನೆಯ ಮೂಲಕ ಕೋಟ್ಯಂತರ ಹಣವನ್ನು ಶ್ರೀ ಸಾಮಾನ್ಯರಿಗೆ ನೀಡುತ್ತಿರುವುದು ಸ್ವಾಗತಾರ್ಹ. ಈ ಅವಧಿಯಲ್ಲಾದರು ಕ್ಷೇಮನಿಧಿಗೆ ಸೂಚಿತ ಮೊತ್ತವನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಮುಂದಿನ ಒಂದು ತಿಂಗಳ ಅವಧಿಯಲ್ಲಿ ಪತ್ರಕರ್ತರ ಮತ್ತು ವಿತರಕರ ಮೂಲಭೂತ ಸೌಲಭ್ಯಗಳ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ನವೆಂಬರ್‌ನಲ್ಲಿ ನಮಗೆ ದೊರಕಬೇಕಾದ ಮೂಲ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಕದ ತಟ್ಟಲಿದ್ದೇನೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಬಜೆಟ್‌ನಲ್ಲಿ ಕಲ್ಯಾಣನಿಧಿಯನ್ನು ಘೋಷಿಸಿದ್ದಲ್ಲಿ ಅದು ಕಾರ್ಯಗತಗೊಳ್ಳಲೇಬೇಕು. ಅದಕ್ಕಾಗಿ ಹಣ ಮೀಸಲಾಗಿರುತ್ತದೆ. ಆದರೆ, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಪ್ರಸ್ತುತ ತಾನು ಮತ್ತು ತನ್ನ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ, ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆಯಿತ್ತರು.
ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಪತ್ರಕರ್ತರು ಮತ್ತು ವಿತರಕರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯಲ್ಲಿ ಪತ್ರಕರ್ತರಿಗೆ ನಿವೇಶನಗಳನ್ನು ಒದಗಿಸುವಂತೆ ಮನವಿ ಇತ್ತು. ಆದರೆ, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಗತ್ಯ ಜಾಗ ಇರಲಿಲ್ಲ. ಇನ್ನು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಇರುವ ಜಾಗಗಳೆಲ್ಲವು ಅರಣ್ಯ ಎಂದು ನಮೂದಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವವರ ಉತ್ತಮ ಬದುಕಿಗಾಗಿ ಸರ್ಕಾರದ ಮಟ್ಟದಲ್ಲಿ ತಮ್ಮಿಂದ ಸಾಧ್ಯವಾಗುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಪತ್ರಿಕಾ ವಿತರಕರ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿರುವ ಶಕ್ತಿ ಪತ್ರಿಕೆಯ ಪ್ರಸರಣಾ ವ್ಯವಸ್ಥಾಪಕ ಕೆ.ಜೆ.ಸುಬ್ಬಯ್ಯರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಜಿಲ್ಲೆಯ ವಿವಿಧೆಡೆಗಳ ೭೦ಕ್ಕೂ ಹೆಚ್ಚು ಪತ್ರಿಕಾ ವಿತರಕರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಭಾಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಪತ್ರಕರ್ತರಾದ ಜಿ.ರಾಜೇಂದ್ರ, ಚಿ.ನಾ.ಸೋಮೇಶ್, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಬಿವೃದ್ಧಿ ಸಂಘದ ನಿರ್ದೇಶಕ ಟಿ.ಜಿ.ಸತೀಶ್ ಉಪಸ್ಥಿತರಿದ್ದರು.