

ರಾಯಚೂರು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಭೀಮಾ ನದಿ ನೀರು ಹಾಗೂ ಮಳೆಯಿಂದ ಹಾನಿ ಸಂಭವಿಸಿದ್ದು ರಾಜ್ಯ ಸರ್ಕಾರ ಕೂಡಲೇ 500 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬಾಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣ ಸ್ವಾಮಿ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕದ ಬೀದರ,ಕಲಬುರಗಿ, ಯಾದಗಿರಿ, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯಿಂದ ಜನಜೀವನ ಬೀದಿಗೆ ಬಂದಿದೆ. ಬೆಳೆ ಸಂಪೂರ್ಣಹಾನಿಯಾಗಿದೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 8500 ರೂ ಪರಿಹಾರ ನೀಡುವದಾಗಿ ಹೇಳಿದೆ.
ಆದರೆ ಮೊದಲು ತುರ್ತಾಗಿ ಪರಿಹಾರ ನೀಡುವ ಕೆಲಸವಾಗಬೇಕಿದೆ. ಮಳೆಹಾನಿಯಿಂದ ಆಗಿರುವ ಸಂಕಷ್ಟ ಭಾರಿ ಹಾನಿ ಉಂಟು ಮಾಡಿದೆ. ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಸರ್ಕಾರದ್ದು ಹೊಣೆಗಾರಿಕೆಯಾಗಿದೆ. ಲೀಸ ಆಧಾರದ ಮೇಲೆ ಕೃಷಿ ಮಾಡುವ ರೈತರಿಗೆ ಪರಿಹಾರ ದೊರೆಯದಂತಾಗಿದ್ದು, ಅವರಿಗೆ ಪರಿಹಾರ ನೀಡುವ ಕೆಲಸ ರಾಜ್ಯ ಸರ್ಕಾರ ಮಾಡಬೇಕಿದೆ.
ಬೆಳೆಹಾನಿಯಿಂದ ನಷ್ಟವಾಗಿ ಮಲ್ಲಿಕಾರ್ಜುನ ಖರ್ಗೆ ಬಳಿಹೋದ ರೈತನಿಗೆ ನಂದೇ ಹೋಗಿದೆ ಎಂದು ಹೇಳಿ ಬೈದು ಕಳಹಿಸಿರುವದು ಬೇಜವಬ್ದಾರಿತವಾಗಿದೆ. ಸರ್ಕಾರ ಮೊದಲು 40 ಎಕರೆ ಬೆಳೆ ನಷ್ಟವಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಪರಿಹಾರ ಕೊಡಲಿ ಎಂದು ವ್ಯಂಗ್ಯವಾಡಿದರು.
ಕಲ್ಯಾಣ ಕರ್ನಾಟಕ ರಸ್ತೆಗಳು ಸರಿಯಾಗಿಲ್ಲದೇ ಇರುವದಿರಂದಲೇ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ರಸ್ತೆಗಳು, ಸೇತುವೆಗಳು ಹಾಳಾದರೂ ಕೇಳುವವರೇ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ 5 ಸಾವಿರ ಕೋಟಿ ಕೊಟ್ಟಿರುವದಾಗಿ ಹೇಳುವ ಸರ್ಕಾರ ರಸ್ತೆಗಳನ್ನು ಸರಿಪಡಿಸಲು ಆಗಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ತಿಪ್ಪರಾಜು ಹಾವಲ್ದಾರ್ ಇದ್ದರು.