

ಎಚ್.ಡಿ.ಕೋಟೆ: ಹವಾಮಾನ ಬದಲಾವಣೆಯಿಂದಾಗಿ ಈ ಬಾರಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿದ್ದು, ಇದಕ್ಕೆ ಸರ್ಕಾರ ನಿಧಿ ಸ್ಥಾಪನೆ ಮಾಡಬೇಕು ಎಂದು ಪೀಪಲ್ ಟ್ರೀ ಕೃಷಿ ಸಂಶೋಧಕ ಎಲ್.ಸಿ.ಚನ್ನರಾಜು ಒತ್ತಾಯಿಸಿದರು.
ಕಳೆದ 10 ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಮಳೆ ಬರುವ ಪ್ರಮಾಣ ಮತ್ತು ದಿನಗಳು ಏರುಪೇರಾಗಿದೆ. ಆದರೆ ನಮ್ಮ ರೈತರು ಹಿಂದಿನ ವರ್ಷಗಳಲ್ಲಿ ಬರುತ್ತಿದ್ದ ಮಳೆಗನುಗುಣವಾಗಿಯೇ ಈಗಿನ ಮಳೆಗೂ ಬೇಸಾಯ ಕ್ರಮ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದರಿಂದಾಗಿ ಬೆಳೆ ಹಾನಿ ಸಂಭವಿಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಿನ ಮಳೆಗೆ ಅನುಗುಣವಾಗಿ ಬೇಸಾಯ ಕ್ರಮ ಅನುಸರಿಸುವ ತರಬೇತಿ ನೀಡಬೇಕು ಮತ್ತು ಹವಾಮಾನ ಬದಲಾವಣೆಯಿಂದ ಆಗುವ ನಷ್ಟವನ್ನು ಈ ನಿಧಿಯಿಂದ ನೀಡಬೇಕು ಎಂದು ಆಗ್ರಹಿಸಿದರು.
ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಂಡು ಬೆಳೆಯುವ ಕಡಿಮೆ ಕಾಲಾವಧಿಯ ಸಿರಿಧಾನ್ಯಗಳಾದ ಸಾಮೆ, ನವಣೆ, ಸಜ್ಜೆ, ಬರಗು ಇವುಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ಅಲ್ಲದೆ ಕಿರು ಧಾನ್ಯಗಳಾದ ನವಣೆ, ಸಾಮೆ, ಬರಗು ಇವುಗಳ ಒಟ್ಟು ತೆಗೆಯಲು ಹೋಬಳಿ ಮಟ್ಟದಲ್ಲಿ ಸಂಸ್ಕರಣೆ ಯಂತ್ರಗಳನ್ನು ಸ್ಥಾಪಿಸಬೇಕು. ಸಿರಿಧಾನ್ಯ ಬೆಳೆಯುವ ರೈತರಿಂದ ಸಿರಿಧಾನ್ಯಗಳನ್ನು ಸಂಗ್ರಹಣೆ ಮಾಡಿ ಸಂಸ್ಕರಿಸಿ ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಮೂಲಕ ವಿತರಿಸುವುದರಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ರೂಪಿಸಿದಂತಾಗುತ್ತದೆ. ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಎಲ್ಲ ಇಲಾಖೆಗಳ ಆಹಾರ ಪಟ್ಟಿಯಲ್ಲಿ ಅಂದರೆ ಅಂಗನವಾಡಿ ಮತ್ತು ಶಾಲೆಗಳಲ್ಲಿ ಸಿರಿಧಾನ್ಯಗಳನ್ನು ಸೇರ್ಪಡೆ ಮಾಡಬೇಕು. ರೈತರ ಒಡಗೂಡಿ ಸ್ಥಳೀಯ ತಳಿ ಸಂಪತ್ತನ್ನು ಸಂರಕ್ಷಣೆ ಮಾಡಬೇಕು. ಸಮುದಾಯ ಬೀಜ ಬ್ಯಾಂಕ್ ಅನ್ನು ಪ್ರೋತ್ಸಾಹಿಸಬೇಕು. ರೈತರನ್ನು ಬೀಜ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುವಂತೆ ಬೀಜ ನಿಗಮ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ರೈತರಿಗೆ ಪ್ರೋತ್ಸಾಹಿಸಲು ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅಧಿಕಾರವನ್ನು ನೀಡಿದಾಗ ರೈತರಿಗೆ ಅನುಕೂಲವಾಗಲಿದೆ. ಸಿರಿಧಾನ್ಯಗಳನ್ನು ಬೆಳೆದರೆ ಮಾರುಕಟ್ಟೆಯ ಕೊರತೆ ಇದೆ. ಸರ್ಕಾರ ಸಿರಿಧಾನ್ಯಗಳನ್ನು ಕೊಂಡುಕೊಳ್ಳುವ ವ್ಯವಸ್ಥೆ ಆಗಬೇಕಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಹೊನ್ನಮ್ಮನಕಟ್ಟೆ ಅಶ್ವಿನಿ, ಜಯಲಕ್ಷ್ಮೀ ನೂರಲಕುಪ್ಪೆ, ರೇಖಾ ಗುರಿಸ್ವಾಮಿ, ಕಟ್ಟೇಮನುಗನಹಳ್ಳಿ ವಿಜಯಲಕ್ಷ್ಮೀ, ಲೀಲಾವತಿ, ಸೋಗಹಳ್ಳಿ ಗೀತಾ, ಪೀಪಲ್ ಟ್ರೀ ಸಂಸ್ಥೆಯ ಸಿಬ್ಬಂದಿ ಜವರೇಗೌಡ, ಸುರೇಶ್, ಲತಾ, ಚನ್ನಬಸಪ್ಪ, ರವಿ ಇದ್ದರು.