

ಮುಂಡರಗಿ: ಅತಿವೃಷ್ಟಿಯಿಂದಾಗಿ ಹಾನಿಯಾದ ಎಲ್ಲ ಬೆಳೆಗಳಿಗೆ ಪರಿಹಾರ ನೀಡಬೇಕು. ಉಳ್ಳಾಗಡ್ಡಿ, ಹೆಸರು, ಗೋವಿನಜೋಳ ಖರೀದಿ ಕೇಂದ್ರ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಇತ್ತೀಚೆಗೆ ಡಂಬಳ ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಂಕರಗೌಡ ಜಯನಗೌಡ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಭಿತ್ತನೆಯಾದ ಹೆಸರು, ಗೋವಿನಜೋಳ, ಶೇಂಗಾ, ಉಳ್ಳಾಗಡ್ಡಿ ಅತಿಯಾದ ಮಳೆಯಿಂದ ಬೆಳೆಗಳು ಸಂಪೂರ್ಣ ನಾಶವಾಗಿದ್ದು ಇದುವರೆಗೂ ಅವುಗಳಿಗೆ ಸರ್ಕಾರ ಬೆಳೆ ಪರಿಹಾರ ನೀಡಿಲ್ಲ. ರೈತರ ಎಲ್ಲ ಬೆಳೆಗಳಿಗೆ ಎಂ.ಎಸ್.ಪಿ ದರ ನಿಗದಿ ಪಡಿಸಬೇಕು. ಡಂಬಳ ಗ್ರಾಮದಲ್ಲಿರುವ ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಪಾಪನಾಶಿ ಸಮೀಪ ಅವೈಜ್ಞಾನಿಕವಾಗಿರುವ ಟೋಲ್‌ಗೇಟ್ ತೆರವುಗೊಳಿಸಬೇಕು.
ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ 7 ತಾಸು 3 ಫೇಸ್ ವಿದ್ಯುತ್ ಅನ್ನು 10 ತಾಸು ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದರು.
ರೈತರಾದ ಬಿ.ಸಿ. ಡಂಬಳಮಠ, ಮಂಜುನಾಥ ಗದಗಿನ, ಪೀರಸಾಬ ಹಳ್ಳಿಕೇರಿ, ಈರಯ್ಯ ಕರವೀರಮಠ, ಹಮೀದಸಾಬ ಹಳ್ಳಿಕೇರಿ, ಶಿವಾಜಿ ಪಾರಪ್ಪನವರ, ಪರಶುರಾಮ ವಡ್ಡರ, ನಿಂಗಪ್ಪ ಸಂಗಟಿ, ಎಸ್.ಪಿ. ಕಾಡಸಿದ್ದೇಶ್ವರಮಠ, ರಾಜಾಭಕ್ಷಿ, ಎಂ.ಡಿ. ಹೊಂಬಳ, ಎಚ್.ಡಿ. ದೊಡ್ಡಮನಿ, ಮಾರುತಿ ಸಂಜೀವಣ್ಣವರ, ರವಿ ಮೇಗೂರ, ಹನಮಪ್ಪ ಒಂಟೆಲಭೋವಿ, ಗಯಪ್ಪ ಜೊಂಡಿ, ಶ್ರೀಧರ ಪಲ್ಲೇದ, ಸೋಮಪ್ಪ ಓಲಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಡಂಬಳ ರೈತ ಸಂರ್ಪಕ ಕೇಂದ್ರದ ಅಧಿಕಾರಿ ಎಸ್.ಬಿ.ರಾಮೇನಹಳ್ಳಿ, ಅರಣ್ಯ ಅಧಿಕಾರಿ ಮೈಲಾರಪ್ಪ ಮಡಿವಾಳರ, ಪಿಡಿಒ ಲತಾ ಮಾನೆ, ಇತರರು ಇದ್ದರು.