ಮೈಕ್ರೋಫೈನಾನ್ಸ್‌ಗಳಿಗೆ ಸರ್ಕಾರ ಕಡಿವಾಣ ಹಾಕಲಿ: ಕರ್ನಾಟಕ ರಾಜ್ಯ ರೈತ ಸಂಘ (ರೈತ ಪರ್ವ) ಆಗ್ರಹ

Published on

ಮೈಸೂರು: ರಾಜ್ಯಾದ್ಯಂತ ಮೈಕ್ರೋಫೈನಾನ್ಸ್‌ಗಳ ಹಾವಳಿ, ಕಿರುಕುಳ ಹೆಚ್ಚಾಗಿದ್ದು ಇವುಗಳಿಗೆ ಸರ್ಕಾರ ಕಡಿವಾಣ ಹಾಕದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ (ರೈತ ಪರ್ವ) ಅಧ್ಯಕ್ಷ ಟಿ.ವಿ.ಅರುಣ್‌ಕುಮಾರ್ ತಿಳಿಸಿದರು.

ಈ ಮೊದಲೆಲ್ಲ ಸಾಲ ಸಿಗುವುದು ಕಷ್ಟವಾಗುತ್ತಿತ್ತು. ಆ ವೇಳೆ ಮೈಕ್ರೋ ಫೈನಾನ್ಸ್‌ಗಳು ವರದಾನವಾಗಿ ಬಂದವು. ಬಳಿಕ ಸಾಲ ಪಡೆಯುವವರಿಗೆ ಸಾಲ ತೀರಿಸುವ ಶಕ್ತಿ ಇದೆಯೇ, ಇಲ್ಲವೇ ಎಂಬುದನ್ನೂ ಯೋಚಿಸದೆ ಸುಲಭವಾಗಿ ದೊಡ್ಡ ಪ್ರಮಾಣದ ಸಾಲ ನೀಡಲಾರಂಭಿಸಿದ ಮೇಲೆ ಸಮಸ್ಯೆ ಉದ್ಭವವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಕ್ರೋಫೈನಾನ್ಸ್‌ಗಳು ಅಧಿಕ ಬಡ್ಡಿ ದರ ವಿಧಿಸುವುದಲ್ಲದೆ ಕಂತು ಪಾವತಿಸಲು ವಿಳಂಬ ಮಾಡಿದ್ದಲ್ಲಿ ಚಕ್ರಬಡ್ಡಿ ಹಾಕಿ ಕಿರುಕುಳ ನೀಡುವುದು ಮುಂದುವರಿದಿದೆ. ಇದೇ ಕಾರಣದಿಂದಾಗಿ ಈ ಭಾಗದ ಹುಲ್ಲಹಳ್ಳಿ, ರಾಂಪುರ, ಮುದ್ದಳ್ಳಿ, ಚಾಮರಾಜನಗರದ ವಿವಿಧೆಡೆ, ಬೆಂಗಳೂರು ಗ್ರಾಮಾಂತರ, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಗುಡ್ಡದ ಬಾವಿಹಳ್ಳಿ, ಬೆಳಗಾವಿ ಮೊದಲಾದ ಕಡೆಗಳಲ್ಲಿ ಮಹಿಳೆಯರು ಕುಟುಂಬವನ್ನೇ ತ್ಯಜಿಸಿ ತಲೆ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.

ಮೈಕ್ರೋಫೈನಾನ್ಸ್‌ಗಳು ಆರ್‌ಬಿಐ ನೀತಿ ನಿಯಮ ಮೀರಿ ಬಡ್ಡಿ ನಿಗದಿ, ವಸೂಲಾತಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿವೆ. ಹೀಗಾಗಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕು. ಸಂತ್ರಸ್ತರ ರಕ್ಷಣೆಗೆ ನಿಲ್ಲಬೇಕೆಂದು ಕೋರಿದರು.

ಪದಾಧಿಕಾರಿಗಳಾದ ಡಾ.ಉಮಾಪತಿ, ಚಾಮರಾಜು ಮಂಡಕಳ್ಳಿ, ತಾರಾ ಕುಮಾರ್, ಬಿ.ಬಿ.ಚಾಂದಿನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net