

ತರೀಕೆರೆ: ಪಟ್ಟಣದ ಯುವ ಜನತೆ ಐತಿಹಾಸಿಕ ಹಿನ್ನೆಲೆಯುಳ್ಳ ಕುಸ್ತಿ ಪರಂಪರೆ ಮುಂದುವರಿಸಬೇಕು ಎಂದು ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಶ್ರೀಗುರು ರೇವಣಸಿದ್ದೇಶ್ವರ ಕುರುಬ ಸಮಾಜ, ಶ್ರೀಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಪುರಸಭೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಮೈಸೂರು ಹೊರತು ತರೀಕೆರೆಯಲ್ಲಿ ನಡೆಯುವ ದಸರಾ ಕುಸ್ತಿ ಪಂದ್ಯಾವಳಿ ಹೆಚ್ಚಿನ ಮಹತ್ವ ಪಡೆದಿದೆ. ಯುವಕರು ಕುಸ್ತಿಯತ್ತ ಆಸಕ್ತಿ ವಹಿಸಿ ಪಾರಂಪರಿಕ ಕ್ರೀಡೆ ಜೀವಂತವಿರಿಸಬೇಕು. ಸರ್ಕಾರ ವಿವಿಧ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವಂತೆ ದೇಸಿ ಕ್ರೀಡೆಗೂ ಮಹತ್ವ ನೀಡಬೇಕು ಎಂದರು.
ಶ್ರೀಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ, ತರೀಕೆರೆ ದಸರಾ ಕುಸ್ತಿ ಸ್ಪರ್ಧೆಗೆ 100 ವರ್ಷಗಳ ಇತಿಹಾಸವಿದೆ. 3 ದಿನ ನಡೆಯಲಿರುವ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ನಾನಾ ಕಡೆಗಳಿಂದ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಪೈಲ್ವಾನರು ಆಗಮಿಸಿ ಬೆಳ್ಳಿ ಗದೆ, ಬೆಳ್ಳಿ ಕಿರೀಟ ಇನ್ನಿತರ ಪ್ರಮುಖ ಬಹುಮಾನಗಳಿಗಾಗಿ ಕಾದಾಡಲಿದ್ದಾರೆ. ಯುವಕರು ದುಶ್ಚಟ ಬಿಟ್ಟು ದೇಹ ಸಧೃಢವಾಗಿಟ್ಟು ಆರೋಗ್ಯವಂತರಾಗಿರಬೇಕು ಎಂದು ಹೇಳಿದರು.
ಕುಸ್ತಿ ಪಂದ್ಯಾವಳಿಯ ಮೊದಲ ದಿನ ಸ್ಥಳೀಯ ಪೈಲ್ವಾನರು ಕೈ ಕೈ ಮಿಲಾಯಿಸಿ ಅಖಾಡದಲ್ಲಿ ವಿವಿಧ ಪ್ರಶಸ್ತಿಗೆ ಸೆಣೆಸಾಡಿದರು. ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಟಿ.ದಾದಾಪೀರ್, ಟಿ.ಜಿ.ಲೋಕೇಶ್, ವೈದ್ಯ ಡಾ.ಟಿ.ಎಂ.ದೇವರಾಜ್, ಮಾಜಿ ಪೈಲ್ವಾನ್ ವಗ್ಗಪ್ಪರ ಮಂಜಣ್ಣ, ಪ್ರಮುಖರಾದ ಸೋಮಶೇಖರ್, ರವಿಕುಮಾರ್ ಮತ್ತಿತರರಿದ್ದರು.