

ಮಾಲೂರು: ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರಿ ಸೇವೆಗಳು ತಕ್ಷಣವೇ ಸಿಗಬೇಕು. ಅಲ್ಲದೆ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳು ನೀಡುವುದಕ್ಕೆ ಗ್ರಾಪಂ ಕಾರ್ಯಾಲಯ ಉತ್ತಮವಾಗಿ ಕೆಲಸ ಮಾಡಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಮಾಲೂರು ಕಸಬಾ ಹೋಬಳಿಯ ಶಿವಾರಪಟ್ಟಣದಲ್ಲಿ ಸೋಮವಾರ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಪಂಗೆ ಒಳಪಡುವ ಗ್ರಾಮಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಸೌಲಭ್ಯಗಳನ್ನು ನೀಡಬೇಕು. ಕುಡಿಯುವ ನೀರು, ಚರಂಡಿ ವ್ಯವಸ್ಥೆ, ವಿದ್ಯುತ್ ದೀಪ ಸೇರಿ ಹಲವು ಸೌಲಭ್ಯಗಳನ್ನು ತ್ವರಿತವಾಗಿ ನೀಡಬೇಕು ಎಂದರು.
ಗ್ರಾಪಂ ಕಚೇರಿ ಸಂಪೂರ್ಣವಾಗಿ ಡಿಜಟಲಿಕರಣವಾಗಿದ್ದು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಕಾರ್ಯನಿರ್ವಹಿಸಬೇಕು. ಹೈಟೆಕ್ ತಂತ್ರಜ್ಞಾನದಲ್ಲಿ ನಿರ್ಮಾಣವಾದ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಲೆಕ್ಕ ಸಹಾಯಕರು, ಬಿಲ್ ಕಲೆಕ್ಟರ್, ಪಿಡಿಒ ಕೊಠಡಿಗಳಿದ್ದು, ಇ&ಸ್ವತ್ತು ಶಾಖೆ, ಕಂದಾಯ ಪಾವತಿ ಶಾಖೆ, ಟಪಾಲು ಶಾಖೆ, ಬಾಪೂಜಿ ಸೇವಾ ಕೇಂದ್ರ, ಸಭಾಂಗಣ, ಸೇರಿ ಸ್ಟೋರ್ ರೂಮ್ ಒಳಗೊಂಡಿದೆ ಎಂದರು.
ಗ್ರಾಪಂ ಕಾರ್ಯದರ್ಶಿ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ. ಮುನಿಯಪ್ಪ, ಗ್ರಾಪಂ ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಸಿ.ಗುರು, ಮಾಲೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ವಸಂತ್ ಇದ್ದರು.