ಸರ್ಕಾರಿ ಶಾಲೆಗಳಿಗೆ ಸಂಘಸಂಸ್ಥೆಗಳ ನೆರವು ಅಗತ್ಯ, ಉಪವಲಯ ಅರಣ್ಯಾಧಿಕಾರಿ ಗುರುಮೂರ್ತಿ ಅಭಿಪ್ರಾಯ

10 Nela ph 01 Note Book Vitharane
Published on

ನೆಲಮಂಗಲ: ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ರೋಟರಿ ಇನ್ನರ್‌ವ್ಹೀಲ್ ಸಂಸ್ಥೆ ಕಾರ್ಯ ಮಹತ್ವವಾದದ್ದು ಎಂದು ಉಪವಲಯ ಅರಣ್ಯಾಧಿಕಾರಿ ಎಂ. ಗುರುಮೂರ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಭಾನುವಾರ ರೋಟರಿ ಇನ್ನರ್‌ವ್ಹೀಲ್ ಸಂಸ್ಥೆ ಆಯೋಜಿಸಿದ್ದ 97ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಾದ್ಯಂತ ಸಾಕಷ್ಟು ಸರ್ಕಾರಿ ಶಾಲೆಗಳಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಜತೆಗೆ ಸರ್ಕಾರೇತರ ಸಂಘಸಂಸ್ಥೆಗಳ ಸಹಕಾರ ಮುಖ್ಯವಾಗಿದೆ ಎಂದರು.

ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಏಕೈಕ ಸ್ಥಳ ಶಾಲೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತ ಮಂದಿ ದೇಶ ಮತ್ತು ರಾಜ್ಯಮಟ್ಟದಲ್ಲಿ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ರೋಟರಿ ಇನ್ನರ್‌ವ್ಹೀಲ್ ಅಧ್ಯಕ್ಷೆ ಮಂಜುಳಾ ಸಿದ್ದರಾಜು ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಉದ್ದೇಶದಿಂದ ನೋಟ್‌ಬುಕ್ ವಿತರಣೆ ಮಾಡಲಾಗುತ್ತಿದೆ. ತಾಲೂಕಿನಾದ್ಯಂತ ನೂರಾರು ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡಲಾಗುತ್ತದೆ. ಗ್ರಾಮೀಣ ಭಾಗದ ಅತಿಹೆಚ್ಚು ರೈತ, ಕಾರ್ಮಿಕ ಸೇರಿ ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ 5 ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಶಾಲಾವರಣದಲ್ಲಿ 25ಕ್ಕೂ ಹೆಚ್ಚು ವಿವಿಧ ಬಗೆಯ ಗಿಡ ನೆಡಲಾಯಿತು. ಉಪವಲಯ ಅರಣ್ಯಾಧಿಕಾರಿ ಎಂ. ಗುರುಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಇನ್ನರ್‌ವ್ಹೀಲ್ ಕಾರ್ಯದರ್ಶಿ ದಿವ್ಯಾ, ಐಎಎಸ್‌ಒ ಪುಷ್ಪಾ, ಖಚಾಂಜಿ ತನುಜಾ, ಸದಸ್ಯೆಯರಾದ ವಿಜಯರಾಜೇಂದ್ರ, ಭಾಗ್ಯಾ, ಮಾಜಿ ಅಧ್ಯಕ್ಷೆ ರೂಪಾ ಮಂಜುನಾಥ್, ಕುಸುಮಾ ರಾಜಣ್ಣ, ಶಾರದಾ ಸುಂದರೇಶ್, ಲತಾ ಶಂಕರಪ್ಪ, ಸರ್ವಮಂಗಳ ನಾಗರಾಜು, ಕೋಮಲಾ ರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net